ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ನೋಂದಣಿ ಇಲಾಖೆಯೂ ಒಂದು. ಇಂತಹ ಇಲಾಖೆಯ ಶಿವಮೊಗ್ಗದ ವಿನೋಬ ನಗರದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಳಾಂತರ ಮಾಡಬೇಕೆಂಬ ಇಲಾಖೆಯ ನಿರ್ಧಾರಕ್ಕೆ ಕೆಲವು ವ್ಯಕ್ತಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈ ವಿರೋಧಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ.
ವಿನೋಬನಗರ ಪೊಲೀಸ್ ಚೌಕಿ ಬಳಿಯ ಸೂಡಾ ಸಂಕೀರ್ಣದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಪ್ರಮುಖ ಇಲಾಖೆಯ ಕಚೇರಿ ಎಂದು ಹೇಳಲೇ ಕಷ್ಟವಾಗುತ್ತಿದೆ. ಯಾವುದೋ ಹಳೆಯ ಕಟ್ಟಡಕ್ಕೆ ಕಷ್ಟಪಟ್ಟು ಎಲ್ಲಿಂದಲೋ ಹೋಗುವಂತಹ ವಾತಾವರಣ ಅಲ್ಲಿದ್ದು, ಇದನ್ನು ಈವರೆಗೆ ಇಲ್ಲಿ ಯಾಕಾಗಿ ಮುಂದುವರೆಸಿದ್ದಾರೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದವು. ಇದನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದ ಒತ್ತಡ ಕೇಳಿ ಬರುತ್ತಲೇ ಇತ್ತು. ಆದರೂ ಇದನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿರಲಿಲ್ಲ. ಇದಕ್ಕೆ ಪ್ರಭಾವಿ ವ್ಯಕ್ತಿಗಳ, ರಾಜಕೀಯ ವಲಯದ ಒತ್ತಡ ಕಾರಣ ಎನ್ನಲಾಗುತ್ತಿದೆ. ಆದರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲ್ಲಿಗೆ ಭೇಟಿ ನೀಡಿದ ಬಳಿಕ ಇದನ್ನು ಸ್ಥಳಾಂತರಿಸಲೇಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಬಳಿಕ ಈ ಸ್ಥಳಾಂತರದ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಆದರೆ, ಬೆನ್ನಲ್ಲೇ ಇದನ್ನು ಸ್ಥಳಾಂತರಿಸಬಾರದು ಎಂದು ಒಂದು ಗುಂಪು ತೀವ್ರ ಒತ್ತಡ ಹಾಕಲಾರಂಭಿಸಿದೆ.ಎಲ್ಲಿಂದ ಎಲ್ಲಿಗೆ ಸ್ಥಳಾಂತರ?:
ಈಗಿರುವ ವಿನೋಬನಗರದ ಸೂಡಾ ಆವರಣದ ಕಟ್ಟಡದಿಂದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವುದು ಜಿಲ್ಲಾಡಳಿತದ ಉದ್ದೇಶ.ಎಪಿಎಂಸಿ ಆವರಣದ ಸ್ಥಳ ವಿಶಾಲವಾಗಿದ್ದು, ಎಲ್ಲ ರೀತಿಯಿಂದಲೂ ಉಪ ನೋಂದಣಾಧಿಕಾರಿಗಳ ಕಚೇರಿ ಸ್ಥಾಪನೆಗೆ ಅನುಕೂಲವಾಗಲಿದೆ. ಜೊತೆಗೆ ಮುಂದಿನ ವರ್ಷ ಇನ್ನೊಂದು ದೊಡ್ಡದಾದ ಕಟ್ಟಡ ನಿರ್ಮಿಸಿಕೊಡಲು ಕೂಡ ಎಪಿಎಂಸಿ ಮುಂದೆ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಈ ಸ್ಥಳವನ್ನು ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಕಚೇರಿ ಸ್ಥಳಾಂತರಿಸಬಾರದು ಎಂಬ ಕೂಗು ಹೆಚ್ಚಾಗುತ್ತಿದೆ. ಆದರೆ ಇದೆಲ್ಲವೂ ಒಂದೇ ವಲಯದಿಂದ ಬರುತ್ತಿದೆ ಎಂಬುದನ್ನು ಜಿಲ್ಲಾಡಳಿತ ಮನಗಂಡಿದೆ.
ವಿರೋಧಕ್ಕೆ ಕಾರಣವೇನು?:ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಕಚೇರಿಯನ್ನು ಈಗಿರುವ ವ್ಯವಸ್ಥೆಯಲ್ಲೇ ಮುಂದುವರಿಸಬೇಕು ಎಂಬ ಕೂಗಿನ ಹಿಂದೆ ವ್ಯವಸ್ಥಿತ ಲಾಬಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ಅವಲಂಬಿತವಾಗಿರುವ ಸ್ಥಾಪಿತ ಹಿತಾಸಕ್ತಿಗಳ ಲಾಬಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಈಗಿರುವ ಸ್ಥಳದಲ್ಲೇ ಮುಂದುವರಿಸಬೇಕು ಎಂದು ಕೆಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಕೊಡುತ್ತಿರುವುದರ ಹಿಂದೆ ಪತ್ರ ಬರಹಗಾರರ ಹಾಗೂ ಬ್ರೋಕರ್‌ಗಳ ಲಾಬಿ ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಸೂಡಾ ಕಾಂಪ್ಲೆಕ್ಸ್ ನಲ್ಲಿ ಮಳಿಗೆಗಳನ್ನು ಹೊಂದಿರುವ ಪತ್ರ ಬರಹಗಾರರು, ಬ್ರೋಕರ್‌ಗಳು, ಝರಾಕ್ಸ್, ಹೋಟೆಲ್ ಮತ್ತಿತರ ಬಾಡಿಗೆದಾರರು ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಸಾರ್ವಜನಿಕ ಹಿತಾಸಕ್ತಿಯ ನೆಪವೊಡ್ಡುತ್ತಿದ್ದಾರೆ.1999ರ ಜುಲೈನಿಂದ ಸೂಡಾ ಕಾಂಪ್ಲೆಕ್ಸ್‌ನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯಾರಂಭ ಮಾಡಿದಾಗಿನಿಂದ ಬಾಡಿಗೆಗೆ ಮಳಿಗೆ ಪಡೆದಿರುವ ಅನೇಕರು ಒಳ ಬಾಡಿಗೆ ಆಧಾರದ ಮೇಲೆ ಬೇರೆಯವರಿಗೆ ನೀಡಿದ್ದಾರೆ. ತಾವು ಪಾವತಿಸುತ್ತಿರುವ ಬಾಡಿಗೆಗೂ ಒಳಗೊಳಗೆ ಪಡೆಯುತ್ತಿರುವ ಬಾಡಿಗೆಗೂ ಸಾಕಷ್ಟು ವ್ಯತ್ಯಾಸವಿದೆ.
ಒಂದು ವೇಳೆ ಸಬ್ ರಿಜಿಸ್ಟ್ರಾರ್ ಕಚೇರಿ ಸೂಡಾ ಕಾಂಪ್ಲೆಕ್ಸ್‌ನಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡರೆ ಅಲ್ಲಿ ಈಗಿನ ದರಕ್ಕೆ ಬಾಡಿಗೆ ಪಾವತಿಸಬೇಕಾ ಗುತ್ತದೆ. ಹಾಗೆಯೇ ಮಳಿಗೆ ಸಿಕ್ಕೇ ಬಿಡುತ್ತದೆ ಎಂಬ ಗ್ಯಾರಂಟಿಯೂ ಇರುವುದಿಲ್ಲ. ಹಾಗಾಗಿ ಈಗಿರುವ ಸ್ಥಳದಲ್ಲೇ ಕಚೇರಿ ಮುಂದುವರಿಸಬೇಕು ಎಂದು ಸ್ಥಾಪಿತ ಹಿತಾಸಕ್ತಿಗಳ ಒತ್ತಾಯದ ಹಿಂದಿರುವ ಲೆಕ್ಕಾಚಾರ.ಈಗಿನ ಕಚೇರಿಕೊರತೆಗಳೇನು?:
ಸುಮಾರು 25 ವರ್ಷದಿಂದ ಸೂಡಾ ಕಚೇರಿಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಕಿಷ್ಕಿಂಧೆಯಂತಿದೆ. ರಿಜಿಸ್ಟ್ರೇಷನ್ ಮತ್ತಿತರ ಕೆಲಸಗಳಿಗಾಗಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಬರುವ ಜನರು ಈಗಿರುವ ಕಚೇರಿಯಲ್ಲಿ ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಓಡಾಡಲು ಒಬ್ಬರನ್ನೊಬ್ಬರು ತಳ್ಳಿಕೊಂಡೇ ಓಡಾಡಬೇಕಾಗಿದೆ. ಮಹಿಳೆಯರಂತೂ ತೀವ್ರ ಮುಜುಗರ ಅನುಭವಿಸುತ್ತಿರುವುದು ನಿತ್ಯ ಸಂಗತಿ. ಒಂದು ರೀತಿಯಲ್ಲಿ ಸಂತೆ ಮಾರುಕಟ್ಟೆ ರೀತಿ ಕಂಡು ಬರುತ್ತಿದೆ.ಜೊತೆಗೆ ಕುಡಿಯುವ ನೀರು, ಶೌಚಾಲಯ, ಲಿಫ್ಟ್ ಮತ್ತಿತರ ಸೌಲಭ್ಯವಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪಾರ್ಕಿಂಗ್ ಅಂತೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಎಲ್ಲೋ ವಾಹನ ನಿಲ್ಲಿಸಿ ಇಲ್ಲಿಗೆ ಬರಬೇಕು. ಇದೇ ಕಾರಣಕ್ಕೆ ಕಚೇರಿಯನ್ನು ಅಗತ್ಯ ಮೂಲ ಸೌಕರ್ಯವಿರುವ ಬೇರೊಂದು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದರ ಅಧಿಕಾರಿಗಳು ಲಿಫ್ಟ್ ಅಳವಡಿಸುವಂತೆ ಸೂಡಾ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದು, ಸೂಡಾ ಆಡಳಿತ ಕೂಡ ತಕ್ಷಣವೇ ಟೆಂಡರ್ ಕರೆದು ಲಿಫ್ಟ್ ಅಳವಡಿಕೆ ಕೆಲಸಕ್ಕೆ ಮುಂದಾಗಿದೆ.
ಎಷ್ಟು ಮಳಿಗೆಗಳಿವೆ?:ಇನ್ನು ಸೂಡಾ ಕಾಂಪ್ಲೆಕ್ಸ್‌ನ ಹಳೇ ಹಾಗೂ ಹೊಸದಾಗಿ ನಿರ್ಮಿಸಿರುವ ಕಟ್ಟಡದಲ್ಲಿ ಒಟ್ಟು 66 ಮಳಿಗೆಗಳಿವೆ. ಇವುಗಳಲ್ಲಿ ಝರಾಕ್ಸ್, ಸ್ಟೇಷನರಿ, ಹೋಟೆಲ್, ಕ್ಯಾಂಟೀನ್, ಡೀಡ್ ರೈಟರ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕನಿಷ್ಠ 1150 ರೂಪಾಯಿಯಿಂದ ಗರಿಷ್ಠ 10,450 ರೂಪಾಯಿ ಮಾಸಿಕ ಬಾಡಿಗೆಯನ್ನು ಲೋಕೋಪ ಯೋಗಿ ಇಲಾಖೆಯ ನಿಯಮದ ಪ್ರಕಾರ ನಿಗದಿಪಡಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.10ರಷ್ಟು ಬಾಡಿಗೆ ಹೆಚ್ಚಿಸಲಾಗುತ್ತಿದೆ.ಹೀಗೆ ಕೆಲವೇ ಸಾವಿರ ರೂಪಾಯಿ ವೆಚ್ಚದಲ್ಲಿ ಬಾಡಿಗೆ ಪಾವತಿಸುತ್ತಿರುವವರಲ್ಲಿ ಹಲವರು ಸಬ್ ರಿಜಿಸ್ಟ್ರಾರ್ ಕಚೇರಿಯನ್ನೇ ನಿಯಂತ್ರಿಸುವಷ್ಟು ಪ್ರಭಾವಿ ಗಳಾಗಿದ್ದಾರೆ. ಹೀಗಿರುವಾಗ ಹೊಸ ಸ್ಥಳಕ್ಕೆ ಕಚೇರಿ ಸ್ಥಳಾಂತರಗೊಂಡರೆ ತಮಗೆ ಬರುವ ಆದಾಯವೇ ನಿಂತು ಹೋಗುತ್ತದೆ ಎಂಬ ಆತಂಕ ಅವರನ್ನು ಕಾಡುತ್ತಿದೆ.ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳು ಹಳೆಯ ಸ್ವರೂಪ ಕಳಚಿಕೊಂಡು ಸುಸಜ್ಜಿತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವುದರ ನಡುವೆಯೇ ಕಿಷ್ಕಿಂಧೆಯಂತಿರುವ ಜಾಗದಲ್ಲೇ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದುವರಿಯಬೇಕು ಎಂಬ ಸ್ಥಾಪಿತ ಹಿತಾಸಕ್ತಿಗಳ ಲಾಬಿಗೆ ಜಿಲ್ಲಾಡಳಿತ ಮಣಿಯುತ್ತದೆಯೋ ಅಥವಾ ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.ಹೊಸ ಕಚೇರಿ ತಲೆಎತ್ತಿ 2 ವರ್ಷಹಾಲಿ ಸೂಡಾ ಕಾಂಪ್ಲೆಕ್ಸ್‌ನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ 1999 ರ ಜುಲೈನಲ್ಲಿ ಆರಂಭಗೊಂಡಿದೆ. ಪ್ರಸ್ತುತ ಸೂಡಾಗೆ ಮಾಸಿಕ 34,916 ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿದೆ. ಇನ್ನಷ್ಟು ಜಾಗ ಬೇಕು ಎಂಬ ಇಲಾಖೆಯ ಮನವಿಗೆ ಸೂಡಾ ಒಪ್ಪಿಗೆ ನೀಡಿ ಎರಡನೇ ಅಂತಸ್ತು ನಿರ್ಮಿಸಿದೆ.
ಹೊಸ ಕಚೇರಿ ನಿರ್ಮಾಣಗೊಂಡು ಸರಿ ಸುಮಾರು ಎರಡು ವರ್ಷ ಕಳೆಯುತ್ತಾ ಬಂದರೂ ನೋಂದಣಿ ಇಲಾಖೆ ಇದರ ಬಳಕೆಗೆ ಮುಂದಾಗಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.ಲಿಫ್ಟ್ ಅಳವಡಿಕೆ ಆಕ್ಷೇಪ
ಲಿಫ್ಟ್ ಅಳವಡಿಕೆ ಕುರಿತು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಾಧಿಕಾರದ ವತಿಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ಪಕ್ಕದ ಪಾರ್ಕ್‌ನಲ್ಲಿ ಲಿಫ್ಟ್ ಅಳವಡಿಸುತ್ತಿರುವ ಕ್ರಮ ಕಾನೂನು ಬಾಹಿರವಾಗಿದೆ. ಇದು ಮಹಾನಗರ ಯೋಜನೆ 2030ರ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಾನಗರ ಯೋಜನೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಪ್ರಾಧಿಕಾರವೇ ನಿಯಮ ಉಲ್ಲಂಘಿಸುತ್ತಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಮಹಾ ನಗರ ಪಾಲಿಕೆ ಈ ನಿರ್ಮಾಣವನ್ನು ತೆರವುಗೊಳಿಸಬೇಕು ಎಂದು ವೇದಿಕೆ ಆಗ್ರಹಿಸಿದೆ.ಜಿಲ್ಲಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಈಗಿರುವ ಸ್ಥಳ ಅತ್ಯಂತ ಕಿರಿದಾಗಿದ್ದು, ಸಾರ್ವಜನಿಕ ಮೂಲಸೌಕರ್ಯ ಇಲ್ಲ ಎಂಬ ಮಾಹಿತಿ ಇದೆ. ಮುಂದಿನ ವಾರ ಇನ್ನೊಮ್ಮೆ ಸ್ಥಳ ಪರಿಶೀಲಿಸಿ ಸಂಬಂಧಿಸಿದ ಸಚಿವರಿಗೆ ವರದಿ ನೀಡುತ್ತೇನೆ. ಸ್ಥಳಾಂತರ ಬೇಕು ಅಥವಾ ಬೇಡ ಎನ್ನುವುದು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿರಬೇಕೇ ಹೊರತು ಯಾರದೋ ವೈಯಕ್ತಿಕ ಹಿತಾಸಕ್ತಿಗಲ್ಲ. ಸಾರ್ವಜನಿಕರಿಗೆ ಯಾವುದು ಅನುಕೂಲವೋ ಅದೇ ರೀತಿ ವರದಿ ನೀಡುತ್ತೇನೆ ಎಂದು ಹೇಳಿದರು.