ಶಿವಮೊಗ್ಗ: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.26ರಿಂದ 28ವರೆಗೆ ಕುವೆಂಪು ರಂಗಮಂದಿರದಲ್ಲಿ ಮೂರು ದಿನ ಶಿವಮೊಗ್ಗ ರಂಗಹಬ್ಬ ಎಂಬ ಹೊಸ ನಾಟಕಗಳ ಉತ್ಸವ ಆಯೋಜಿಸಿದೆ ಎಂದು ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಹೇಳಿದರು.
ಈ ನಾಟಕೋತ್ಸವದಲ್ಲಿ ಮೊದಲ ದಿನ ಮಾ.26ರಂದು ಸಂಜೆ 6.45ಕ್ಕೆ ಸಹ್ಯಾದ್ರಿ ಕಲಾ ತಂಡವು ನಾ. ಶ್ರೀನಿವಾಸ್ ಅವರು ರಚಿಸಿರುವ ಗಾಂಧಿಯ ಕನ್ನಡಕ ನಾಟಕವನ್ನು ಡಾ.ಜಿ.ಆರ್.ಲವ ನಿರ್ದೇಶನದಲ್ಲಿ ಅಭಿನಯಿಸಲಿದೆ. ಮಾ.27ರಂದು ಸಂಜೆ 6.45ಕ್ಕೆ ರಂಗಬೆಳಕು ತಂಡ ಶಿವಕುಮಾರ್ ಮಾವಲಿ ಅವರ ಪ್ರೇಮಪತ್ರದ ಆಫೀಸ್ ಮತ್ತು ಇತರೆ ಕಥೆಗಳು ಹಾಗೂ ಶೇಕ್ಸ್‌ಪಿಯರ್ ಕೃತಿ ಆಧರಿಸಿದ ಒಲವಿನ ಜಂಕ್ಷನ್ ನಾಟಕವನ್ನು ಅಜಯ್ ನೀನಾಸಂ ಅವರ ನಿರ್ದೇಶನದಲ್ಲಿ ಅಭಿನಯಿಸಲಿದೆ. ಮಾ.28ರಂದು ಸಂಜೆ 6.45ಕ್ಕೆ ಹೊಂಗಿರಣ ರಂಗತಂಡ ಡಾ.ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದಲ್ಲಿ ಮಹಿಳಾ ಭಾರತ ನಾಟಕ ಪ್ರದರ್ಶಿಸಲಿದೆ. ಈ ನಾಟಕದ ಫ್ರೆಂಚ್ ಮೂಲ ಕೆ.ಮಾಧವನ್ ಅವರದ್ದಾಗಿದ್ದು, ಕನ್ನಡಕ್ಕೆ ಅಭಿಲಾಷಾ.ಎಸ್ ಅನುವಾದಿಸಿದ್ದಾರೆ. ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಗೀತೆಗಳ ಗಾಯನ ಕಾರ್ಯಕ್ರಮವೂ ಇರುತ್ತದೆ ಎಂದು ಮಾಹಿತಿ ನೀಡಿದರು.
ಮಾ.26ರಂದು ವಿಶ್ವ ರಂಗಭೂಮಿ ದಿನಾಚರಣೆಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು. ಮಾ.27ರಂದು ಜಿ.ಆರ್.ಲವ ಹಾಗೂ ಅಜಯ್ ನಿನಾಸಂ ಅವರನ್ನು ಸನ್ಮಾನಿಸಲಾಗುವುದು. ಒಂದು ನಾಟಕಕ್ಕೆ ಒಬ್ಬರಿಗೆ ಪ್ರವೇಶ ದರ 50 ರು. ದರ ನಿಗದಿ ಮಾಡಲಾಗಿದೆ. ಶಿವಮೊಗ್ಗದ ರಂಗಾಸಕ್ತರು ನಾಟಕಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.ಸಂಘದ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸಹಕಾರ ತತ್ವದ ಆಧಾರದಲ್ಲಿ ನಾಟಕೋತ್ಸವಗಳ ಒಕ್ಕೂಟ ಆಯೋಜಿಸುತ್ತಿದ್ದು, ರಂಗತಂಡಗಳಿಗೆ ಸಂಪೂರ್ಣ ಹೊರೆಯಾಗದಂತೆ ಭಾಗಶಃ ಜವಾಬ್ದಾರಿವಹಿಸುತ್ತಿದೆ. ಪ್ರತಿ ವರ್ಷ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಅತ್ಯಂತ ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಈ ನಾಟಕ ಪ್ರದರ್ಶನದಲ್ಲಿ ನಿಗದಿಪಡಿಸಿದರುವ ಪ್ರವೇಶ ದರವನ್ನು ಆಯಾ ತಂಡಗಳಿಗೆ ನೀಡಲಾಗುತ್ತಿದೆ ಎಂದರು.
ಕಲಾವಿದರು ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಅಧ್ಯಕ್ಷರಾಗಿ ಕಾಂತೇಶ್ ಕದರಮಂಡಲಗಿ, ಉಪಾಧ್ಯಕ್ಷರಾಗಿ ಡಿ.ಎಂ. ರಾಜಕುಮಾರ್, ಆರ್.ಎಸ್.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿಗಳಾಗಿ ಎಸ್.ಎಚ್.ಸುರೇಶ್, ಟಿ.ಮನು, ಖಜಾಂಚಿಯಾಗಿ ಗಣೇಶ್ ಕೆಂಚನಾಲ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಎಚ್.ಎಸ್.ಸುರೇಶ್, ಜಿ.ಆರ್.ಲವ, ಸಾಸ್ವೆಹಳ್ಳಿ ಸತೀಶ್ ಇದ್ದರು.