ಸಿಹಿ ಗೆಣಸು ಬೆಳೆದು ಸೈ ಎನಿಸಿಕೊಂಡ ಶಿವಾನಂದ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಗೆಣಸು ಸುಮಾರು 4 ರಿಂದ 5 ತಿಂಗಳ ಅವಧಿಯಲ್ಲಿ ಬೆಳೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಇದನ್ನು ಬೆಳೆಯಬಹುದಾಗಿದೆ.ಗೆಣಸಿನ ಬಳ್ಳಿಯ ಕಾಂಡ ಮತ್ತು ಬೇರುಗಳನ್ನು ನಾಟಿ ಮಾಡುತ್ತಾರೆ.

ಅಶೋಕ ಸೊರಟೂರ ಲಕ್ಷ್ಮೇಶ್ವರ

ಕೃಷಿ ಎಂದರೆ ಬರಿ ನಷ್ಟ ಎಂದು ಕೊಂಡವರಿಗೆ ಕೇವಲ 1 ಎಕರೆಯಲ್ಲಿ ಸಿಹಿ ಗೆಣಸು ಬೆಳೆದು ಲಕ್ಷಾಂತರ ಆದಾಯ ಗಳಿಸಿ ಸೈ ಎನಿಸಿಕೊಂಡಿರುವ ರೈತ ಶಿವಾನಂದ ಗೊಜನೂರ ನಮ್ಮ ಕಣ್ಮುಂದೆ ಎದ್ದು ಕಾಣುತ್ತಾರೆ.

ಪಟ್ಟಣದ ರೈತ ಶಿವಾನಂದ ಗೊಜನೂರ ತಮ್ಮ 1.2 ಎಕರೆ ಜಮೀನಿನಲ್ಲಿ ಕಳೆದ 2-3 ವರ್ಷಗಳಿಂದ ಸಿಹಿ ಗೆಣಸು ಬೆಳೆದು ಹೆಚ್ಚಿನ ಆದಾಯ ಗಳಿಸುವ ಮೂಲಕ ಯುವ ರೈತರಿಗೆ ಮಾರ್ಗದರ್ಶಿಯಾಗಿದ್ದಾರೆ.

ಪಟ್ಟಣದಿಂದ ಹರದಗಟ್ಟಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ 1.2 ಎಕರೆ ಹೊಲದಲ್ಲಿ ಸಿಹಿ ಗೆಣಸು ಬೆಳೆಯುತ್ತಿದ್ದಾರೆ. ಈಗ ಸುಮಾರು 1 ಎಕರೆ ಗೆಣಸು ಕಿತ್ತು ಮಾರಾಟ ಮಾಡಿ ಸುಮಾರು ₹1.50 ಲಕ್ಷ ಲಾಭ ಮಾಡಿಕೊಂಡಿದ್ದಾರೆ.ಇವರ ಹೊಲದಲ್ಲಿ ಬೆಳೆದಿರುವ ಗೆಣಸಿನಲ್ಲಿ ನಾರಿನ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದು ಹಾಗೂ ಹೆಚ್ಚು ಪಿಷ್ಟ ಮತ್ತು ಸಕ್ಕರೆ ಅಂಶ ಹೊಂದಿರುವುದು ವಿಶೇಷವಾಗಿದೆ. ಹೀಗಾಗಿ ಕೆಜಿಯೊಂದಕ್ಕೆ ₹15-16 ಗಳಂತೆ ಮಾರಾಟ ಮಾಡಲಾಗಿದೆ ಎಂದು ರೈತರು ಹೇಳಿದರು.

ಸಿಹಿ ಗೆಣಸು ಬೆಳೆಯಲು ಮರಳು ಮಿಶ್ರಿತ ಕೆಂಪು ಜಮೀನು ಸೂಕ್ತವಾಗಿರುತ್ತದೆ. ಇವರ ಹೊಲದಲ್ಲಿ 3.5 ಕೆಜಿ ತೂಕದ ಬೃಹದಾಕಾರದ ಗೆಣಸು ಬೆಳೆಯುವ ಮೂಲಕ ರೈತರ ಆದಾಯಕ್ಕೆ ಇಂಬು ನೀಡಿದೆ.

ಗೆಣಸು ಸುಮಾರು 4 ರಿಂದ 5 ತಿಂಗಳ ಅವಧಿಯಲ್ಲಿ ಬೆಳೆಯುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಇದನ್ನು ಬೆಳೆಯಬಹುದಾಗಿದೆ.ಗೆಣಸಿನ ಬಳ್ಳಿಯ ಕಾಂಡ ಮತ್ತು ಬೇರುಗಳನ್ನು ನಾಟಿ ಮಾಡುತ್ತಾರೆ. ಬಳ್ಳಿಯನ್ನು ಜೋಪಾನವಾಗಿ ಕಾಯ್ದುಕೊಂಡು ಮುಂದಿನ ವರ್ಷಕ್ಕೆ ನಾಟಿ ಮಾಡಲು ಉಪಯೋಗಿಸಿಕೊಳ್ಳುವ ಕಾರ್ಯ ಮಾಡಲಾಗುತ್ತಿದ್ದು. ಈ ವರ್ಷ ಗೆಣಸಿನ ಬಳ್ಳಿಯ ನಾಟಿ ಮಾಡಲು ಹಾಗೂ ಔಷಧಿ ಸಿಂಪರಣೆಗಾಗಿ ಸುಮಾರು ₹25 ಸಾವಿರ ಖರ್ಚು ಮಾಡಿದ್ದೇವೆ. ಎಕರೆಗೆ ಸುಮಾರು 100 ಕ್ವಿಂಟಲ್‌ಗಿಂತ ಅಧಿಕ ಗೆಣಸು ಬೆಳೆಯುತ್ತೇವೆ ಎನ್ನುತ್ತಾರೆ ಶಿವಾನಂದ ಗೊಜನೂರ.

Share this article