ಸಹಕಾರಿ ಕ್ಷೇತ್ರಕ್ಕೆ ಶಿವಪ್ಪರ ಕೊಡುಗೆ ಅಪಾರ: ಸ್ವಾಮೀಜಿ

KannadaprabhaNewsNetwork | Published : Mar 3, 2024 1:33 AM

ಸಾರಾಂಶ

ತಿಪಟೂರು: ತಿಪಟೂರಿನ ಮಾಜಿ ಶಾಸಕರಾಗಿದ್ದ ಲಿಂಗೈಕ್ಯ ವಿ.ಎಲ್. ಶಿವಪ್ಪ ಅವರು ಸಮಾಜ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು ಎಂದು ನಗರದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಿಪಟೂರು: ತಿಪಟೂರಿನ ಮಾಜಿ ಶಾಸಕರಾಗಿದ್ದ ಲಿಂಗೈಕ್ಯ ವಿ.ಎಲ್. ಶಿವಪ್ಪ ಅವರು ಸಮಾಜ ಹಾಗೂ ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು ಎಂದು ನಗರದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಗುರುಕುಲಾನಂದಾಶ್ರಮದ ಲಿಂಗೈಕ್ಯ ಜಗದ್ಗುರು ಪಟ್ಟದ ಕರಿಬಸವದೇಶಿಕೇಂದ್ರ ಸ್ವಾಮಿಗಳ ಗದ್ದುಗೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 326ನೇ ಬೆಳದಿಂಗಳ ಶರಣಧರ್ಮ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ನೇರ, ನಡೆ ನುಡಿಗಳನ್ನು ಹೊಂದಿದ್ದ ಲಿಂಗೈಕ್ಯ ವಿ.ಎಲ್. ಶಿವಪ್ಪ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ’ಶ್ರೇಷ್ಠ ಸಹಕಾರಿ’ ಪ್ರಶಸ್ತಿಯನ್ನು ಕೊಡ ಮಾಡಿತ್ತು. ಸಿದ್ದರಾಮನ ಅನುಯಾಯಿಯಾಗಿ ಶ್ರೀಮಠದ ಏಳಿಗೆಯ ಗಟ್ಟಿ ಧ್ವನಿಯಾಗಿ, ಬಸವಣ್ಣನವರ ತತ್ವದಂತೆ ಎಲ್ಲಾ ಸಮುದಾಯದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಪಾರವಾಗಿ ಶ್ರಮಿಸಿದ್ದರು ಎಂದರು.

ಉಪನ್ಯಾಸ ನೀಡಿದ ಸಂಯೋಜನಾಧಿಕಾರಿ ಡಾ.ಎಲ್.ಎಂ. ವೆಂಕಟೇಶ್, ‘ಸಮಕಾಲೀನ ಜಗತ್ತಿಗೆ ವಚನಗಳ ಪ್ರಸ್ತುತತೆ’ ವಿಷಯವಾಗಿ ಮಾತನಾಡಿ, ವಚನ ಸಾಹಿತ್ಯ ಈ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿಯಾಗಿದ್ದು ಜನ ಸಾಮಾನ್ಯರ ಧ್ವನಿಯಾಗಿದೆ. ಶ್ರಮ ಸಂಸ್ಕೃತಿಗೆ ಹೆಚ್ಚಿನ ಗೌರವ ತಂದು ಮಾನವೀಯ ಮೌಲ್ಯಗಳೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನುಗೊಳ್ಳುವಂತೆ ಅಂತರಂಗ, ಬಹಿರಂಗ ಶುದ್ಧಿಯೊಂದಿಗೆ ವಿಶ್ವಶಾಂತಿಗೆ ಕೊಡುಗೆ ನೀಡುವಲ್ಲಿ ವಚನಗಳು ಇಂದಿಗೂ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿವೆ ಎಂದರು.

ಕಾರ್ಯಕ್ರಮದಲ್ಲಿ ಸೇವಾಕರ್ತರಾದ ರತಿದೇವಿ, ನಿವೃತ್ತ ಪ್ರಾಚಾರ್ಯ ಬೆಟ್ಟಯ್ಯ ನಾಗರಾಜು, ಡಿ.ಎಸ್. ಶಿವಗಂಗಾ, ಪ.ಪೂ. ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿ.ಎಸ್. ವಿಜಯ್‌ಕುಮಾರ್‌, ಸರ್ಕಾರದ ನಿವೃತ್ತ ಜಂಟಿ ಕಾರ್ಯದರ್ಶಿ ಕೊಟ್ಟಿಗೆಹಳ್ಳಿ ಬಸವರಾಜು, ನಿವೃತ್ತ ಪೋಲಿಸ್ ಅಧಿಕಾರಿ ಮಹಾದೇವಯ್ಯ, ವರ್ತಕರಾದ ಬಸವರಾಜು, ವೇ. ಎಚ್.ಎಸ್. ಸಿದ್ದರಾಮಯ್ಯ ಮತ್ತಿತರರಿದ್ದರು. ಪಿಆರ್‌ಒ ಜೆ.ಇ. ಭರತ್ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ವಿ.ಬಿ. ಮಹಾಲಿಂಗಯ್ಯ ನಿರೂಪಿಸಿ, ಸಂಸ್ಕೃತ ಶಿಕ್ಷಕ ವೇ. ಚಂದನ್‌ಶಾಸ್ತ್ರಿ ವಂದಿಸಿದರು.

Share this article