ಧಾರ್ಮಿಕ ಕಾರ್ಯಗಳ ಶ್ರೀಕಾರ ಶಿವಸಂಗಮೇಶ್ವರ ಸ್ವಾಮೀಜಿ

KannadaprabhaNewsNetwork |  
Published : Jun 01, 2025, 01:31 AM IST
31ಕೆಕೆಆರ್3:ಲಿಂ. ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರು | Kannada Prabha

ಸಾರಾಂಶ

೧೯೬೪ರಲ್ಲಿ ಮುನಿರಾಬಾದ್‌ಗೆ ತುಂಗಾಸ್ನಾನಕ್ಕಾಗಿ ಹೋದಾಗ ಬುತ್ತಿ ಸಮೇತ ಕಾವಿಬಣ್ಣದ ಜೋಳಿಗೆ ಶ್ರೀಗಳಿಗೆ ದೊರೆಯಿತು. ಕಾವಿ ಕೈಲಾಸದ ವರ ಪ್ರಸಾದವಾಯಿತು. ಭಕ್ತವೃಂದದ ಉದ್ಧಾರಕ್ಕೆ ಮಿಡಿಯಿತು.

ಅಮರೇಶ್ವರಸ್ವಾಮಿ ಕಂದಗಲ್ಲಮಠ

ಕುಕನೂರು:

ಜಿಲ್ಲೆ ಸೇರಿದಂತೆ ವಿವಿಧೆಡೆ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸುತ್ತಿದ್ದ ತಾಲೂಕಿನ ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ ಮೇ 28ರಂದು ಭಕ್ತರು ಅಗಲಿದ್ದು, ಜೂ. 1ರಂದು ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪುಣ್ಯಾರಾಧನೆ ನಡೆಯಲಿದೆ.

ಆಧ್ಯಾತ್ಮಿಕತೆ, ಸಾಮಾಜಿಕ ಪರಿಕಲ್ಪನೆ ಜತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ವೈಚಾರಿಕತೆಯನ್ನು ಪಸರಿಸಿದ ಹಿರಿಮೆ ಶಿವಸಂಗಮೇಶ್ವರ ಶ್ರೀಗಳದು. ಅತ್ಯಂತ ಅನುಭವಿ ಮತ್ತು ಹಿರಿಯ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದ ಅವರು ಅಧ್ಯಯನ ಪಾರಂಗತ ಹಾಗೂ ಜ್ಯೋತಿಷ್ಯ ಪ್ರಾವಿಣ್ಯತೆ ಪಡೆದಿದ್ದರು.

ಸಾಮಾಜಿಕ ಕೈಂಕರ್ಯ:

1970ರಲ್ಲಿ ಬೆದವಟ್ಟಿ ಹಿರೇಮಠದ ಪೀಠಾಧಿಪತಿಯಾದ ಶ್ರೀಗಳು 1996ರಲ್ಲಿ ಬೆದವಟ್ಟಿಯಲ್ಲಿ ಲಕ್ಷ ದೀಪೋತ್ಸವ, 1993ರಿಂದ ಮಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ, 1996ರಲ್ಲಿ ಬೆದವಟ್ಟಿಗೆ ಪಂಚಪೀಠಾಧೀಪತಿಗಳನ್ನು ಕರೆಯಿಸಿ 300 ಜೋಡಿ ಸಾಮೂಹಿಕ ವಿವಾಹ ಮಾಡಿದ್ದರು. ಅಂದು ನೆರೆದಿದ್ದ ಸಾವಿರಾರು ಭಕ್ತರಿಗೆ ಮಾದಲಿ ಮಾಡಿಸಿ 1008 ಕೆಜಿ ತುಪ್ಪವನ್ನು ಭಕ್ತರ ಸಹಕಾರದಲ್ಲಿ ಬಡಿಸಿದ್ದರು. 2018ರಲ್ಲಿ ಮಠಕ್ಕೆ ನೂತನ ರಥ ನಿರ್ಮಿಸಿ ರಥೋತ್ಸವ ನೆರವೇರಿಸಿದರು. ಪ್ರತಿವರ್ಷ ಜಂಗಮ ವಟುಗಳಿಗೆ ದೀಕ್ಷಾ, ಪುರಾಣ ಪ್ರವಚನ ನೆರವೇರಿಸಿ ಅನೇಕ ಮಕ್ಕಳಿಗೆ ಮಠದಲ್ಲಿ ವಿದ್ಯಾದಾನ ಮಾಡಿದ್ದರು.

ಬೆದವಟ್ಟಿ ಮಠದ ರುದ್ರಾಕ್ಷಿ ಶಕ್ತಿ:

ಬೆದವಟ್ಟಿಯ ಶ್ರೀಮಠದ 8ನೇ ಗುರುಗಳಾದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ವೇಳೆ ಶ್ರೀಗಳು ಧರಿಸಿದ್ದ ಒಂದು ರುದ್ರಾಕ್ಷಿಯನ್ನು ಶಿವಸಂಗಮೇಶ್ವರ ಶ್ರೀಗಳ ಕೊರಳಿಗೆ ಅವರ ತಂದೆ ತಂದು ಕಟ್ಟಿದರು. ಆಗಲೇ ದೇಹದಲ್ಲಿ ಬೆಳಕು ಸಂಚರಿಸಿದಂತಾಯಿತಂತೆ. ದೇಹ ಹಗುರವಾಗಿ ಅಗೋಚರ ಶಕ್ತಿಯೊಂದು ಮೈಮನದಲ್ಲಿ ಸುಳಿದಾಡಿ ಗಾಳಿಯಲ್ಲಿ ತೇಲಾಡಿದಂಥ ಅವಿಸ್ಮರಣೀಯ ಅನುಭವವಾಯಿತಂತೆ. ಇಂಥದ್ದೊಂದು ಗುರುವಿನ ರುದ್ರಾಕ್ಷಿಧಾರಣೆಯ ಫಲವೇ ಶಿವಸಂಗಮೇಶ್ವರ ಶಿವಾಚಾರ್ಯರನ್ನು ಬೆದವಟ್ಟಿ ಹಿರೇಮಠ ತನ್ನತ್ತ ಬರಮಾಡಿಕೊಂಡಿತು.

ತುಂಗೆಲ್ಲಿ ಸಿಕ್ಕ ಕಾವಿ ಜೋಳಿಗೆ:

೧೯೬೪ರಲ್ಲಿ ಮುನಿರಾಬಾದ್‌ಗೆ ತುಂಗಾಸ್ನಾನಕ್ಕಾಗಿ ಹೋದಾಗ ಬುತ್ತಿ ಸಮೇತ ಕಾವಿಬಣ್ಣದ ಜೋಳಿಗೆ ಶ್ರೀಗಳಿಗೆ ದೊರೆಯಿತು. ಕಾವಿ ಕೈಲಾಸದ ವರ ಪ್ರಸಾದವಾಯಿತು. ಭಕ್ತವೃಂದದ ಉದ್ಧಾರಕ್ಕೆ ಮಿಡಿಯಿತು. ಶಿವಸಂಗಮೇಶ್ವರ ಸ್ವಾಮೀಜಿ ಸಂಚಾರ ಮೂರ್ತಿಗಳಾಗಿ ಶಿಷ್ಯರ ಮನೆ-ಮನೆಗೆ ಹೋಗಿ ಶಿಷ್ಯ ಕೋಟಿಯನ್ನುದ್ಧಾರ ಮಾಡುತ್ತ, ಸಾಮಾನ್ಯ ಜನರ ಬದುಕು ತಿದ್ದುತ್ತ, ಸನ್ಮಾರ್ಗಗಾಮಿಗಳಾಗುವಂತೆ ಶ್ರೀಗಳು ಪಟ್ಟ ಪ್ರಯತ್ನ ಅಪಾರ ಮತ್ತು ಅನನ್ಯ.

ಧಾರ್ಮಿಕತೆ ತಾತ್ವಿಕ ತಳಹದಿಯನ್ನು ಅತ್ಯಂತ ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದರು. ತಮ್ಮ ಜೀವಾತಾವಧಿಯಲ್ಲಿ 1600ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ನೂತನ ದೇವಸ್ಥಾನ ಹಾಗೂ ಗೋಪುರಗಳ ಉದ್ಘಾಟನೆ ಬಹುತೇಕವಾಗಿ ಶಿವಸಂಗಮೇಶ್ವರ ಶಿವಾಚಾರ್ಯರೇ ಮಾಡಿದ್ದಾರೆ. ಅವರ ಅಗಲಿಕೆ ಭಕ್ತರಿಗೆ ನೋವು ತಂದಿದೆ.

ಶಿವಶಂಕರಯ್ಯ ಲಕ್ಕುಂಡಿಮಠ, ವಿದ್ಯಾಸಾಗರ ಪ್ರಿಂಟರ್ಸ್, ಕುಕನೂರುಶ್ರೀಗಳು ನಿತ್ಯ ಮೂರು ಹೊತ್ತು ಲಿಂಗಪೂಜೆ ಮಾಡುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ ಲಿಂಗಪೂಜೆಗೆ ಆದ್ಯತೆ ನೀಡುತ್ತಿದ್ದರು. ಧಾರ್ಮಿಕ ಚಟುವಟಿಕೆಯ ಶಿರೋಮಣಿಯಾಗಿದ್ದ ಅವರು ಜನಸಾಮಾನ್ಯರ ಸ್ವಾಮೀಜಿ ಎಂದೇ ಅಧ್ಯಾತ್ಮ ಲೋಕ ಬಣ್ಣಿಸುತ್ತದೆ.

ಹರೀಶ್ವರ ಎಸ್. ಹಿರೇಮಠ, ಕಾರ್ಯದರ್ಶಿ, ಸಿದ್ದೇಶ್ವರ ದೇವಸ್ಥಾನ ಸೇವಾ ಸಮಿತಿ, ಯಡಿಯಾಪುರ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...