ಕನ್ನಡಪ್ರಭ ವಾರ್ತೆ ಕಲಬುರಗಿ
ಇದರೊಂದಿಗೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸ್ಥಾನದ ಪಟ್ಟ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರಿಗೆ ಜಾಕ್‌ಪಾಟ್ ರೂಪದಲ್ಲಿ ಒಲಿದು ಬಂದಂತಾಗಿದೆ. ಬಿಜೆಪಿ ನಗರ ಅಧ್ಯಕ್ಷರಾಗಿದ್ದ ಸಿದ್ದು ಪಾಟೀಲ್ ಅವರನ್ನು ಕೈಬಿಟ್ಟು, ಆ ಸ್ಥಾನದಲ್ಲಿ ಎಂಎಲ್‌ಸಿ ಬಿಜಿ ಪಾಟೀಲರ ಪುತ್ರ ಚಂದ್ರಶೇಖರ್ ಪಾಟೀಲ್ ಅವರನ್ನು ನೇಮಕ ಮಾಡಿ ಆದೇಶ ಹೊರಬಿದ್ದಿದೆ.
ಇಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ನಿರೀಕ್ಷೆಯಂತೆ ನಡೆಯದೆ ಅಚ್ಚರಿ ಎಂಬಂತೆ ಘೋಷಣೆಯಾಗಿದೆ ಎಂಬ ಮಾತುಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಬಿಜೆಪಿ ಪಡೆಯಲಿಲ್ಲ. ಸ್ವತಃ ರದ್ದೇವಾಡಗಿ ಕೂಡಾ ಜೇವರ್ಗಿ ಅಸೆಂಬ್ಲಿ ಕಣಕ್ಕಿಳಿದಿದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಹೀಗಾಗಿ ರದ್ದೆವಾಡಗಿ ಬದಲಾವಣೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದವು.ಆದಾಗ್ಯೂ, ಪಕ್ಷದ ಸಂಘಟನೆಯಲ್ಲಿ ಅವರು ತೊಡಗಿಸಿಕೊಂಡಿದ್ದು ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದಕ್ಕಾಗಿ ರದ್ದೆವಾಡಗಿ ಅವರೇ ಮರು ಆಯ್ಕೆಯಾಗಬೇಕೆಂಬ ನಿರ್ಧಾರದ ಹಿನ್ನೆಲೆ ವರಿಷ್ಠರು ಅವರನ್ನೇ ಪಕ್ಷದ ಹುದ್ದೆಯಲ್ಲಿ ಮುಂದುವರೆಸಿದ್ದಾರೆಂದು ಹೇಳಲಾಗುತ್ತಿದೆ.
ಒಂದು ಹಂತದಲ್ಲಿ ಹರ್ಷಾನಂದ್ ಗುತ್ತೇದಾರ್ ಹೆಸರನ್ನು ಬಹುತೇಕ ಮುಖಂಡರು ಶಿಫಾರಸ್ಸು ಮಾಡಿದ್ದರು. ಸ್ವತಃ: ಶಿವರಾಜ್ ಪಾಟೀಲ್ ರದ್ದೇವಾಡಗಿ ಅವರೇ ಹರ್ಷಾನಂದ್ ಗುತ್ತೇದಾರ್ ತಮ್ಮ ಉತ್ತರಾಧಿಕಾರಿಯಾಗಬೇಕು ಎಂದು ಬಯಸಿದ್ದರು. ಆದಾಗ್ಯೂ, ಹರ್ಷಾನಂದ್ ಗುತ್ತೇದಾರ್ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ತಮ್ಮ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಡಿ ಎಂದು ಬಹಿರಂಗವಾಗಿಯೇ ಕೋರಿದ್ದರು.
ಹಾಗೂ ಹೀಗೂ ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಬಗಲಿ ಇಲ್ಲವೇ ಅವ್ವಣ್ಣ ಮ್ಯಾಕೇರಿ ಅವರಿಬ್ಬರಲ್ಲಿ ಒಬ್ಬರಾಗುವುದು ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದವು. ಕೊನೆಗೂ ರದ್ದೆವಾಡಗಿ ಅವರನ್ನೇ ಮುಂದುವರೆಸುವ ಮೂಲಕ ಎಲ್ಲ ವದಂತಿಗಳಿಗೆ ವರಿಷ್ಠರು ತೆರೆ ಎಳೆದಿದ್ದಾರೆ.
ನಗರ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕ್ಷೇತ್ರ ಕಳೆದುಕೊಂಡಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಬಲಪಡಿಸಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆಯುವ ದಿಸೆಯಲ್ಲಿ ನೂತನ ಅಧ್ಯಕ್ಷರಿಗೆ ಒಂದು ರೀತಿಯ ಸವಾಲಾಗಿದೆ.