ಕನ್ನಡಪ್ರಭವಾರ್ತೆ ಮಡಿಕೇರಿ
ನಗರದ ಓಂಕಾರೇಶ್ವರ, ವೀರಭದ್ರಮುನೇಶ್ವರ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಕುಂದುರುಮೊಟ್ಟೆ ಚೌಡೇಶ್ವರಿ, ರಾಜರಾಜೇಶ್ವರಿ ದೇವಾಲಯ, ಭಾಗಮಂಡಲದ ಭಗಂಡೇಶ್ವರ-ತಲಕಾವೇರಿ ಸೇರಿದಂತೆ ವಿವಿಧೆಡೆ ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ದೇವಾಲಯದ ಮುಂದೆ ಸರದಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು. ಶಿವರಾತ್ರಿ ಹಿನ್ನೆಲೆ ದೇವಾಲಯವನ್ನು ಹಸಿರು ತೋರಣ, ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಭಗಂಡೇಶ್ವರ-ತಲಕಾವೇರಿ: ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷದಂತೆ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆ ೭ ಗಂಟೆಗೆ ಶತರುದ್ರಾಭಿಷೇಕ, ದೇವರ ಉತ್ಸವ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನೆ ಮತ್ತು ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ನಂತರ ತಾಯಂಬಕ ಸೇವೆ, ಲಕ್ಷದೀಪೋತ್ಸವ, ಏಕಾದಶ ರುದ್ರಾಭಿಷೇಕ ನಡೆಯಿತು.ಓಂಕಾರೇಶ್ವರ ದೇವಾಲಯ: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರುದ್ರಹೋಮ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರುರಾಜರಾಜೇಶ್ವರಿಗೆ ವಿವಿಧ ಪೂಜೆ: ಮಡಿಕೇರಿಯ ಕರ್ಣಂಗೇರಿ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಂತರ ಭಕ್ತಾದಿಗಳಿಂದ ಪಂಚಲಿಂಗಕ್ಕೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆ ನಡೆಯಿತು. ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಇದ್ದರು.
ನಗರದ ದಾಸವಾಳ ಬಡಾವಣೆಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಚಿಟ್ಟೆಗಳಿಂದ ಶಿವಲಿಂಗ ನಿರ್ಮಿಸಿ ಮಹಾ ಶಿವರಾತ್ರಿ ವಿಶೇಷ ಪೂಜಾ ಕೈಂಕರ್ಯ ಭಾನುವಾರ ನಡೆಯಿತು.