ಗೋಕರ್ಣದಲ್ಲಿ ಶಿವರಾತ್ರಿ ಮಹೋತ್ಸವ ಪ್ರಾರಂಭ

KannadaprabhaNewsNetwork |  
Published : Feb 21, 2025, 12:45 AM IST
ರಥ ಕಟ್ಟುವ ಕಾರ್ಯ ಅಂತಿಮಗೊಳ್ಳುತ್ತಿರುವುದು | Kannada Prabha

ಸಾರಾಂಶ

ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವ ಫೆ. ೨೧ರಿಂದ ಪ್ರಾರಂಭವಾಗಲಿದೆ. ಮುಂಜಾನೆ ಗಣೇಶ ಪೂಜೆ, ಧ್ವಜಾರೋಹಣ ನೆರವೇರಲಿದ್ದು, ಈ ಮೂಲಕ ಒಂಭತ್ತು ದಿನಗಳ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವ ಫೆ. ೨೧ರಿಂದ ಪ್ರಾರಂಭವಾಗಲಿದೆ.

ಮುಂಜಾನೆ ಗಣೇಶ ಪೂಜೆ, ಧ್ವಜಾರೋಹಣ ನೆರವೇರಲಿದ್ದು, ಈ ಮೂಲಕ ಒಂಭತ್ತು ದಿನಗಳ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಪ್ರತಿ ದಿನ ದೇವರ ದರ್ಶನಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಲಿದ್ದು, ಶಿವರಾತ್ರಿಯ ಶಿವಯೋಗ ಮಹಾಪರ್ವದ ದಿನವಾದ ಫೆ. ೨೬ರಂದು ಮತ್ತಷ್ಟು ಜನರು ಬರಲಿದ್ದು, ಅವರಿಗಾಗಿ ದೇವರ ದರ್ಶನಕ್ಕೆ ಸರತಿ ಸಾಲು ಹಾಗೂ ಪಶ್ಚಿಮ ದ್ವಾರದಿಂದ ಮುಖ್ಯ ಕಡಲತೀರದ ವರೆಗೆ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ.

ಎರಡು ಹೊತ್ತು ದೇವಾಲಯದ ಅಮೃತಾನ್ನ ಭೋಜನ ಶಾಲೆಯಲ್ಲಿ ಉಚಿತ ಪ್ರಸಾದ ಭೋಜನ, ಶಿವರಾತ್ರಿಯಂದು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮತ್ತಿತರ ಅನುಕೂಲತೆಯನ್ನು ಒದಗಿಸಲಾಗಿದೆ. ಮಂದಿರ ಶಿಖರ ಹಾಗೂ ಸುತ್ತಲಿನ ಪ್ರಕಾರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮವಿಲ್ಲ: ಹಲವು ವರ್ಷಗಳಿಂದ ಮಂದಿರದ ವತಿಯಿಂದ ಇಲ್ಲಿನ ಮುಖ್ಯ ಕಡಲತೀರದಲ್ಲಿ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು, ಆದರೆ ಈ ವರ್ಷ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ.

ರಥ ಕಟ್ಟುವ ಕಾರ್ಯ ಮುಕ್ತಾಯದ ಹಂತಕ್ಕೆ: ರಥಸಪ್ತಮಿ ದಿನದಂದು ರಥಕ್ಕೆ ಪೂಜೆ ಸಲ್ಲಿಸಿ ರಥ ಕಟ್ಟುವ ಕಾರ್ಯ ರೂಢಿಗತ ಪರಂಪರೆಯಂತೆ ನಡೆಯುತ್ತಿದ್ದು, ಹಾಲಕ್ಕಿ ಒಕ್ಕಲಿಗ ಸಮಾಜದವರು ತಮ್ಮ ನೈಪುಣ್ಯತೆಯಲ್ಲಿ ಏಳು ಅಂತಸ್ತಿನ ರಥವನ್ನು ಕಟ್ಟಿದ್ದು, ಅಡ್ಡ ಹಾಗೂ ಉದ್ದದಲ್ಲಿ ದಬ್ಬೆ ಕಟ್ಟುವ ಕಾರ್ಯ ಮಾಡುತ್ತಿದ್ದು, ಇದು ಕೊನೆಯ ಹಂತವಾಗಿದೆ. ದೇವರ ಧ್ವಜಾರೋಹಣದ ಬಳಿಕ ವಿವಿಧ ಬಣ್ಣದ ಆಕರ್ಷಕ ಪತಾಕೆ ಕಟ್ಟುವ ಮೂಲಕ ಫೆ. ೨೮ರಂದು ನಡೆಯುವ ರಥೋತ್ಸವಕ್ಕೆ ಸಿದ್ಧಗೊಳ್ಳಲಿದೆ.

ಪೊಲೀಸ್‌ ಬಂದೋಬಸ್ತ್‌: ವಾಹನ ದಟ್ಟಣೆ ಸಂಚಾರ ನಿಯಂತ್ರಣಕ್ಕೆ ಈಗಾಗಲೇ ಪೊಲೀಸ್ ಇಲಾಖೆ ತಯಾರಿ ನಡೆಸಿದ್ದು, ಏಕಮುಖ ಸಂಚಾರ ಸೇರಿದಂತೆ ಸಂಚಾರ ನಿಯಮ ಮೀರಿ ಬರುವ ವಾಹನದ ಮೇಲೆ ಸೂಕ್ತ ಕ್ರಮ ಜರುಗಿಸಲು ಸಜ್ಜಾಗಿದೆ. ಜಿಲ್ಲೆಯ ವಿವಿಧೆಡೆ ಹಾಗೂ ಕಾರವಾರ ಮೀಸಲು ಪೊಲೀಸ್ ಇಲ್ಲಿಗೆ ಬಂದೋಬಸ್ತಿಗೆ ಆಗಮಿಸಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಖಾಕಿ ಪಡೆ ಸನ್ನದ್ಧವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!