ಸಾಮಾಜಿಕ ಚಳವಳಿಯ ಸ್ವರೂಪವನ್ನು ಕೊಟ್ಟವರು ಶಿವಶರಣರು: ಅಶೋಕ್

KannadaprabhaNewsNetwork |  
Published : Jul 11, 2025, 11:48 PM IST
11ಕೆಎಂಎನ್ ಡಿ22 | Kannada Prabha

ಸಾರಾಂಶ

ಬಸವಣ್ಣನವರ ಸಾಮಾಜಿಕ ಹೋರಾಟದಲ್ಲಿ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದರು. ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ನಾವೆಲ್ಲರೂ ಒಟ್ಟಿಗೆ ಸಾಗುವ ಮೂಲಕ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎನ್ನುವ ಸದಾಶಯದಿಂದ ರಾಜ್ಯ ಸರ್ಕಾರ 34 ಮಹನೀಯರ ಜಯಂತಿಯನ್ನು ಆಚರಿಸುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮತಾವಾದಿ ಸಮಾಜ ಹಾಗೂ ಜಾತಿ ವಿನಾಶದ ಹೋರಾಟಕ್ಕೆ ಸಾಮಾಜಿಕ ಚಳವಳಿಯ ಸ್ವರೂಪವನ್ನು ಕೊಟ್ಟವರು ಶಿವ ಶರಣರು ಎಂದು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮಹಾ ಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ತಾಲೂಕು ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

11ನೇ ಶತಮಾನದಲ್ಲಿ ದೇವರ ದಾಸಿಮಯ್ಯ, ಡೋಹರ ಕಕ್ಕಯ್ಯ, ಮಾದಿಗರ ಚೆನ್ನಯ್ಯ ಮುಂತಾದ ಶರಣರು ಜಾತಿ ವಿನಾಶದ ನವ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯದ ಮೂಲಕ ಮೊದಲ ಮುನ್ನುಡಿ ಬರೆದರು. ಬಸವ ಪೂರ್ವದ ವಚನಕಾರರು ಹಾಕಿಕೊಟ್ಟ ಸಾಮಾಜಿಕ ಹೋರಾಟದ ನೆಲೆಗಟ್ಟಿನಲ್ಲಿ ಬಸವಾದಿ ಪ್ರಥಮರು ಜಾತಿ ರಹಿತ ನವ ಸಮಾಜ ನಿರ್ಮಾಣಕ್ಕೆ ಸಂಘಟಿತ ಹೋರಾಟ ಆರಂಭಿಸಿದರು ಎಂದರು.ಬಸವಣ್ಣನವರ ಸಾಮಾಜಿಕ ಹೋರಾಟದಲ್ಲಿ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದರು. ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ನಾವೆಲ್ಲರೂ ಒಟ್ಟಿಗೆ ಸಾಗುವ ಮೂಲಕ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎನ್ನುವ ಸದಾಶಯದಿಂದ ರಾಜ್ಯ ಸರ್ಕಾರ 34 ಮಹನೀಯರ ಜಯಂತಿಯನ್ನು ಆಚರಿಸುತ್ತಿದೆ. ಮಹನೀಯರ ತತ್ವಗಳ ಪಾಲನೆ ಮೂಲಕ ನಾವೆಲ್ಲರೂ ಪರಸ್ಪರ ಸಹಕಾರ ತತ್ವದ ಮೂಲಕ ಅಭಿವೃದ್ದಿಯ ಪಥದಲ್ಲಿ ಸಾಗೋಣ ಎಂದರು.

ಹಡಪದ ಅಪ್ಪಣ್ಣನವರನ್ನು ಕುರಿತು ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ವಿಶೇಷ ಉಪನ್ಯಾಸ ನೀಡಿ, ಅಪ್ಪಣ್ಣನವರ ಹೆಸರಿನಲ್ಲಿ ನಯನಜ ಕ್ಷತ್ರೀಯ ಅಭಿವೃದ್ದಿ ನಿಗಮವನ್ನು ಸ್ಥಾಪಿಸುವಂತೆ ಆಗ್ರಹಿಸಿದರು.

ನಯನಜ ಕ್ಷತ್ರೀಯ, ನಾಪಿತ, ಹಡಪದ, ಮುಂತಾದ ಹೆಸರಿನಿಂದ ಗುರುತಿಸಿಕೊಳ್ಳುತ್ತಿರುವ ನಯನಜ ಕ್ಷತ್ರೀಯ ಜನ ಅಚ್ಚ ಕನ್ನಡಿಗರು. ನಯನಜ ಕ್ಷತ್ರೀಯ ಸಮಾಜಕ್ಕೆ ಕನ್ನಡವನ್ನು ಹೊರತು ಪಡಿಸಿದರೆ ಇತರ ಭಾಷೆಗಳು ಬರುವುದಿಲ್ಲ. ಕ್ಷೌರಿಕ ವೃತಿ ಮತ್ತು ಮಂಗಳ ವಾದ್ಯ ನುಡಿಸುವುದನ್ನೆ ಕುಲಕಸುಬನ್ನಾಗಿಸಿಕೊಂಡಿರುವ ನಮ್ಮ ಸಮಾಜ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ ಎಂದರು.

ಅಚ್ಚ ಕನ್ನಡಿಗರಾದ ನಯನಜ ಕ್ಷತ್ರೀಯ ಸಮಾಜದ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಸಾಪಿಸುವಂತೆ ನಮ್ಮ ಸಂಘ ನಿರಂತರ ಹೋರಾಟ ನಡೆಸುತ್ತಿದೆ. ಸರ್ಕಾರ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪಿಸಿ ಅಪ್ಪಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸಿವಂತೆ ಮನವಿ ಮಾಡಿದರು.

ಈ ವೇಳೆ ಸಿಡಿಪಿಓ ವಿದ್ಯಾವತಿ, ಆರೋಗ್ಯ ಇಲಾಖೆ ಶೀಳನೆರೆ ಸತೀಶ್ ಸೇರಿದಂತೆ ವಿವಿಧ ಇಲಾಖೆ ಪ್ರತಿನಿಧಿಗಳು ಹಾಗೂ ತಾಲೂಕು ಸಮಾಜದ ಮುಖಂಡರಾದ ಮರಿಯ್ಯಯ್ಯ, ವೆಂಕಟರಾಮು, ರಾಮಕೃಷ್ಣ, ಶ್ಯಾಂಸುಂದರ್, ಗೋವಿಂದ, ಶೇಖರ, ಕೆ.ಆರ್.ಮಂಜುನಾಥ್, ಸುನೀಲ್, ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV