ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಶಿವಶರಣ ಮಾದಾರ ಚನ್ನಯ್ಯನವರ ದಾಳದ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.ಹಬ್ಬದ ಅಂಗವಾಗಿ ಗ್ರಾಮದ ಮಾದಾರ ಚನ್ನಯ್ಯ ಸಮಾಜದ ನೂರಾರು ಮುತ್ತೈದೆಯರು ಗ್ರಾಮದಿಂದ ಹೊರಗಿನ ಹೊಸಹೊಳಲು ದೊಡ್ಡಕೆರೆಯವರೆಗೆ ತೊಂಬಿಟ್ಟಿನಾರತಿ ಹೊತ್ತು ಮೆರವಣಿಗೆಯಲ್ಲಿ ಸಾಗಿ ಗಂಗಾ ಪೂಜೆ ಮಾಡಿದರು.
ಶಾಸಕ ಎಚ್.ಟಿ. ಮಂಜು ಭಾಗಿಯಾಗಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ದೊಡ್ಡಕೆರೆ ಬಯಲಿನಲ್ಲಿ ವಿಶೇಷವಾಗಿ ಪ್ರತಿಷ್ಠಾಪಿಸಲಾಗಿದ್ದ ಕಳಸಗಳ ಪೂಜೆ ಮಾಡುವ ಮೂಲಕ ಶಾಸಕ ಎಚ್.ಟಿ.ಮಂಜು ಹಬ್ಬದ ಶುಭಾಶಯ ಕೋರಿದರು.ಈ ವೇಳೆ ಮಾತನಾಡಿದ ಶಾಸಕರು, ನಮ್ಮ ಸಂಸ್ಕೃತಿ ಮತ್ತು ಪರಂಪರೆ ಮೇಲೆ ಬೆಳಕು ಚೆಲ್ಲುವ ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳು ಗ್ರಾಮೀಣ ಜನರಲ್ಲಿ ಸ್ನೇಹ ಸೌಹಾರ್ದಾತೆ ಮೂಡಿಸುವ ಜೊತೆಗೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಲು ನೆರವಾಗಲಿದೆ ಎಂದರು.
ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿವುದರಿಂದ ಬಾಂಧವ್ಯಗಳು ಸಂವರ್ಧನೆಗೊಳ್ಳುತ್ತವೆ. ಹೊಸಹೊಳಲು ಗ್ರಾಮಸ್ಥರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಭಾವೈಕ್ಯತೆಯನ್ನು ಬೆಸೆಯುವ ಹಬ್ಬಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.ನಂತರ ಗ್ರಾಮದ ಮಾರಮ್ಮನ ದೇವಾಲಯ ಹಾಗೂ ಚನ್ನಯ್ಯನವರ ದೇವಾಲಯದ ಆವರಣದಿಂದ ಮಾದಾರ ಚನ್ನಯ್ಯ ಸಮಾಜದ ಪ್ರತಿ ಮನೆಯಿಂದ ಮುತ್ತೈದೆಯರು ತೊಂಟಿಟ್ಟಿನ ಆರತಿ ಹೊತ್ತು ಮೆರವಣಿಗೆಯ ಮೂಲಕ ಸಾಗಿದರು.
ಮಹಾ ಶರಣ ಮಾದಾರ ಚನ್ನಯ್ಯ ಹಾಗೂ ಹರಳಯ್ಯ ಅವರ ಹೆಸರಿನಲ್ಲಿ ವಿಶೇಷವಾಗಿ ರೂಪಿಸಿದ್ದ ದಾಳ (ಭಾವುಟ)ವನ್ನು ಹಿಡಿದು ಡೊಳ್ಳು ಹಾಗೂ ಮಂಗಳ ವಾಧ್ಯಗಳೊಂದಿಗೆ ಮೆರವಣಿಗೆ ದೊಡ್ಡಕೆರೆ ಆವರಣಕ್ಕೆ ಬಂದು ಸೇರಿತು.ಹಬ್ಬದ ಅಂಗವಾಗಿ ಕಳೆದ ಒಂದು ವಾರದಿಂದ ವಿಶೇಷ ವ್ರತಾಚರಣೆಯಲ್ಲಿದ್ದ 10 ವರ್ಷ ಪೂರೈಸದ ಐವರು ಬಾಲೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹೊಸಹೊಳಲು ದೊಡ್ಡ ಕೆರೆಗೆ ತೊಂಬಿಟ್ಟಿನಾರತಿ ಹೊತ್ತು ಬಂದ ಮಹಿಳೆಯರು ಗಂಗಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಕರಗಗಳನ್ನು ಹೊತ್ತು ನಡೆಮುಡಿಯೊಂದಿಗೆ ಸಾಗಿ ತಮ್ಮ ತಮ್ಮ ಮನೆಗಳಿಗೆ ಮರಳಿದರು.
ಮಾದಾರ ಚನ್ನಯ್ಯನವರ ಹೆಸರಿನಲ್ಲಿ ನಿರ್ಮಿಸಿದ್ದ ಕೇಸರಿ ದಾಳ ಮತ್ತು ಹರಳಯ್ಯನವರ ಹೆಸರಿನಲ್ಲಿ ಕಟ್ಟಿದ್ದ ಚರ್ಮದ ದಾಳವನ್ನು ಬೇವಿನ ಮರದಲ್ಲಿ ಕಟ್ಟುವ ಮೂಲಕ ದಾಳದ ಹಬ್ಬದ ಶರಣರ ಪೂಜಾ ಕಾರ್ಯಗಳು ಮುಕ್ತಾಯಗೊಂಡವು.ದಾಳಗಳನ್ನು (ಭಾವುಟ) ಬೇವಿನ ಮರದಲ್ಲಿ ಕಟ್ಟಿದ ಅನಂತರ ಜನರು ತಾವು ಸಾಕಿರುವ ಆಡು, ಕುರಿ ಮೇಕೆಗಳೊಂದಿಗೆ ಮೆರವಣಿಗೆ ನಡೆಸಿ ಶಕ್ತಾನುಸಾರ ಮನೆ ದೇವರಿಗೆ ಬಲಿ ನೀಡಿ ಕೃತರ್ಥರಾದರು.
ಈ ವೇಳೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಪುರಸಭೆ ಸದಸ್ಯರಾದ ಗಾಯಿತ್ರಿ, ಕಲ್ಪನಾ, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಆರ್.ಟಿ.ಓ ಮಲ್ಲಿಕಾರ್ಜುನ್, ಮುಖಂಡರಾದ ಶಿವಣ್ಣ, ಎಚ್.ಪುಟ್ಟರಾಜು, ಶಿವನಂಜಯ್ಯ, ಪುಟ್ಟರಾಜು, ಸುರೇಶ್ ಹರಿಜನ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.