ಅಪ್ರಾಪ್ತ ಮಗುಗೆ ಅಲ್ವಾವಧಿ ಪಾಸ್‌ಪೋರ್ಟ್‌ : ಹೈಕೋರ್ಟ್ ಅಸ್ತು

KannadaprabhaNewsNetwork |  
Published : May 08, 2026, 03:45 AM IST
High Court

ಸಾರಾಂಶ

ದಂಪತಿ ನಡುವಿನ ವೈಮನಸ್ಸು ಅಥವಾ ಜಗಳಕ್ಕೆ ಅಪ್ರಾಪ್ತ ಮಗು ಬಲಿಯಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ತಂದೆಯ ಒಪ್ಪಿಗೆ ಇಲ್ಲದಿದ್ದರೂ ಐದು ವರ್ಷದ ಹೆಣ್ಣು ಮಗುವಿಗೆ ಅಲ್ಪಾವಧಿಯ ಪಾಸ್ ಪೋರ್ಟ್ ನೀಡುವಂತೆ ಪ್ರಾದೇಶಿಕ ಪಾಸ್ ಪೋರ್ಟ್‌ ವಿತರಣಾ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.

 ಬೆಂಗಳೂರು :  ದಂಪತಿ ನಡುವಿನ ವೈಮನಸ್ಸು ಅಥವಾ ಜಗಳಕ್ಕೆ ಅಪ್ರಾಪ್ತ ಮಗು ಬಲಿಯಾಗಬಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ತಂದೆಯ ಒಪ್ಪಿಗೆ ಇಲ್ಲದಿದ್ದರೂ ಐದು ವರ್ಷದ ಹೆಣ್ಣು ಮಗುವಿಗೆ ಅಲ್ಪಾವಧಿಯ ಪಾಸ್ ಪೋರ್ಟ್ ನೀಡುವಂತೆ ಪ್ರಾದೇಶಿಕ ಪಾಸ್ ಪೋರ್ಟ್‌ ವಿತರಣಾ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.

ತಂದೆಯ ಒಪ್ಪಿಗೆ ಕಾರಣ ಅಧಿಕಾರಿಗಳು ಪಾಸ್‌ಪೋರ್ಟ್‌ ನೀಡುತ್ತಿಲ್ಲ. ಹಾಗಾಗಿ, ತನ್ನ ಮಗುವಿಗೆ ಪಾಸ್‌ಪೋರ್ಟ್‌ ನೀಡಲು ನಿರ್ದೇಶನ ನೀಡಬೇಕು ಎಂದು ಕೋರಿ ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಪೀಠ ಈ ಆದೇಶ ಮಾಡಿದೆ.

ಪಾಸ್‌ ಪೋರ್ಟ್‌ ಅವಧಿ ಮುಗಿಯುವ ಮುನ್ನವೇ ಭಾರತಕ್ಕೆ ಹಿಂದಿರುಗಬೇಕು

ವಿದೇಶದಲ್ಲಿರುವ ಅಜ್ಜಿ-ತಾತ ಅವರನ್ನು ಭೇಟಿ ಮಾಡಿ ಪಾಸ್‌ ಪೋರ್ಟ್‌ ಅವಧಿ ಮುಗಿಯುವ ಮುನ್ನವೇ ಭಾರತಕ್ಕೆ ಹಿಂದಿರುಗಬೇಕು. ಈ ಸಂಬಂಧ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಷರತ್ತು ವಿಧಿಸಿದ ನ್ಯಾಯಪೀಠ, ಮುಂದಿನ ಒಂದು ವಾರದಲ್ಲಿ ಮಗುವಿಗೆ ಪಾಸ್‌ಪೋರ್ಟ್‌ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರ ಮಗು ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯರೊಂದಿಗೆ ಬೇಸಿಗೆ ರಜೆ ಕಳೆಯಲು ಆಸ್ಟ್ರೇಲಿಯಾಗೆ ತೆರಳಲು ಉದ್ದೇಶಿಸಿದ್ದರು. ಆದರೆ, ಪಾಸ್‌ಪೋರ್ಟ್ ನಿಯಮಗಳ ಪ್ರಕಾರ ಅಪ್ರಾಪ್ತ ಮಕ್ಕಳಿಗೆ ಪಾಸ್‌ಪೋರ್ಟ್ ಪಡೆಯಲು ತಂದೆ ಮತ್ತು ತಾಯಿ ಇಬ್ಬರ ಒಪ್ಪಿಗೆ ಕಡ್ಡಾಯ. ಪ್ರಕರಣದಲ್ಲಿ ತಂದೆ ಒಪ್ಪಿಗೆ ನೀಡಲು ನಿರಾಕರಿಸಿದ್ದರಿಂದ ಪಾಸ್‌ಪೋರ್ಟ್ ಪ್ರಾಧಿಕಾರ ಅರ್ಜಿಯನ್ನು ಬಾಕಿ ಉಳಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್, ಅಪ್ರಾಪ್ತ ಮಕ್ಕಳಿಗೆ ಪಾಸ್‌ಪೋರ್ಟ್‌ ನೀಡುವಾಗ ಪೋಷಕರಿಬ್ಬರ ಅನುಮತಿ ಕಡ್ಡಾಯ. ಆದರೆ, ಪೋಷಕರು ಒಪ್ಪಿಗೆ ನೀಡಲು ನಿರಾಕರಿಸಿದಾಗ ಅಪ್ರಾಪ್ತರ ಕಾನೂನು ಬದ್ಧ ಹಕ್ಕುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ತಂದೆ ನ್ಯಾಯಾಲಯದ ನೋಟಿಸ್ ಸ್ವೀಕರಿಸದೆ ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಒಬ್ಬ ಪೋಷಕರು ಅನಗತ್ಯವಾಗಿ ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದಾಗ ಮಗುವಿನ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಿಸಬಹುದು ಎಂದು ಪೀಠ‌ ತಿಳಿಸಿದೆ.

ಕುಟುಂಬದ ಸದಸ್ಯರನ್ನು ಭೇಟಿ ಮಾಡುವುದು ಮಗುವಿನ ನ್ಯಾಯಸಮ್ಮತ ಹಕ್ಕು. ದಂಪತಿ ನಡುವಿನ ಹಳಸಿದ ಸಂಬಂಧ ಮಗುವಿನ ಹಕ್ಕುಗಳನ್ನು ಮೊಟಕುಗೊಳಿಸಬಾರದು.‌ ಈ ಕಾರಣಕ್ಕೆ ತಂದೆಯ ಅನುಮತಿಯಿಲ್ಲದೆಯೂ ವಿದೇಶಿ ಪ್ರವಾಸಕ್ಕೆ ಎಂಟು ವಾರಗಳ ಕಾಲ ಪಾಸ್‌ಪೋರ್ಟ್‌ ನೀಡಲು ಸೂಚನೆ‌ ನೀಡಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮೇಕೆದಾಟು ಯೋಜನೆಗೆ 10-15 ದಿನದಲ್ಲಿ ಡಿಪಿಆರ್‌
ಡಿಕೆಶಿ ಸರ್ಕಾರದ 100 ದಿನ ಕಾರ್ಯಕ್ರಮಕ್ಕೆ ಸಿದ್ಧತೆ