ಹಿರಿಯೂರು ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಎಲ್ಲಾ ಹೋಬಳಿಗಳಿಂದಲೂ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತಾಲೂಕು ಕೇಂದ್ರಕ್ಕೆ ಆಗಮಿಸುತ್ತಾರೆ. ಪ್ರಮುಖವಾಗಿ ಧರ್ಮಪುರ, ಜವನಗೊಂಡನಹಳ್ಳಿ, ಐಮಂಗಲ ಹೋಬಳಿಗಳ ಪ್ರದೇಶಗಳಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಿದ್ದು ಅವರಿಗೆ ಬಸ್ ಸಮಸ್ಯೆ ಸದಾ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಕಾಲೇಜುಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ನಗರದ ವಾಣಿ ಕಾಲೇಜಿನ ಬಳಿ ಬಸ್ ನಿಲ್ಲಿಸುವುದಿಲ್ಲ. ನಗರದ ಸರ್ವಿಸ್ ರಸ್ತೆಯಲ್ಲಿ ಬಸ್ ನಿಲುಗಡೆ ಮಾಡದೇ ಹೆದ್ದಾರಿಯಲ್ಲಿ ನಿಲ್ಲಿಸುತ್ತಾರೆ. ಅಲ್ಲಿಂದ ನಡೆದು ಕಾಲೇಜು ತಲುಪಬೇಕು. ಧರ್ಮಪುರದಿಂದ-ಶಿರಾ ಮಾರ್ಗವಾಗಿ, ತುಮಕೂರು ಮತ್ತು ಬೆಂಗಳೂರಿನತ್ತ ಸಂಚರಿಸುವ ಮಾರ್ಗದಲ್ಲಿ ಹಾಗೂ ಹಿರಿಯೂರಿನಿಂದ ಚಿತ್ರದುರ್ಗಕ್ಕೆ ಸಂಚರಿಸುವ ಸರ್ಕಾರಿ ಬಸ್‌ಗಳಲ್ಲಿ ಸೀಟ್ ಸಿಗುವುದಿರಲಿ ಒಳಗಡೆ ಕಾಲಿಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ 2026-27ನೇ ಸಾಲಿನಲ್ಲಿ ಸುಮಾರು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿ ಇದೆ ಸಂಸ್ಥೆಯಲ್ಲಿ ತರಗತಿಗಳು ಪ್ರತಿ ದಿನ ಬೆಳಗ್ಗೆ 9:30 ರಿಂದ ಪ್ರಾರಂಭವಾಗಿ ಸಂಜೆ 5ಕ್ಕೆ ಮುಗಿಯುತ್ತವೆ. ಹಿರಿಯೂರು ನಗರದಿಂದ ಸಂಸ್ಥೆಗೆ ಬಂದು ಹೋಗುವ ಸಲುವಾಗಿ ಬೆಳಗ್ಗೆ ಹಾಗೂ ಸಂಜೆ ಚಿತ್ರದುರ್ಗ ಹಿರಿಯೂರು ಮಾರ್ಗದ ಬಸ್‌ಗಳನ್ನು ಕಾಲೇಜು ಮುಂಭಾಗ ನಿಲುಗಡೆ ಮಾಡಲು ಸಂಬಂಧಪಟ್ಟವರು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ವೀರೇಶ್ ಯಾದವ್, ರಾಜ್ಯಕಾರ್ಯಕಾರಿಣಿ ಸದಸ್ಯ ಕುಬೇರ್ ಯಾದವ್, ಸುದೀಪ್, ಕನಕ ರಾಜ್ ಕೋಡಿಹಳ್ಳಿ, ಟಿ.ತರುಣ್ ಕುಮಾರ್, ಚೇತನ್, ಅಕ್ಷಯ್ ಕುಮಾರ್, ರಮೇಶ್, ಓಬಳೇಶ್, ತಿಪ್ಪೇಸ್ವಾಮಿ, ರಂಗನಾಥ್, ಚಿದಾನಂದ, ಪುರುಷೋತ್ತಮ್, ಕಾವ್ಯ, ರಕ್ಷಿತಾ, ಭೂಮಿಕಾ, ಭವಾನಿ ಮುಂತಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.