ಹೋಟೆಲ್ ಉದ್ಯಮಕ್ಕೆ ವಾಣಿಜ್ಯ ಸಿಲಿಂಡರ್ ಕೊರತೆ

KannadaprabhaNewsNetwork |  
Published : Mar 24, 2026, 02:15 AM IST
ಸೌದೆ ಒಲೆ ಬಳಸಿ ಅಡುಗೆ ಮಾಡುತ್ತಿರುವುದು. | Kannada Prabha

ಸಾರಾಂಶ

ತಾಲೂಕಿನಲ್ಲಿ ವಾಣಿಜ್ಯ ಸಿಲಿಂಡರ್‌ನ‌ ಕೊರತೆ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನಲ್ಲಿ ವಾಣಿಜ್ಯ ಸಿಲಿಂಡರ್‌ನ‌ ಕೊರತೆ ಹೋಟೆಲ್ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಕೆಲ ಹೋಟೆಲ್‌ಗಳು ಸೌದೆ ಒಲೆ ಬಳಸಿಕೊಂಡು ಸೀಮಿತ ಮೆನುಗಳೊಂದಿಗೆ ಆಹಾರ ತಯಾರಿಸುತ್ತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮಿಗಳು ಕಂಗಾಲಾಗಿದ್ದಾರೆ. ಹಣ ಕೊಟ್ಟರೂ ಸಿಲಿಂಡರ್ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗೃಹಬಳಕೆ ಸಿಲಿಂಡರ್ ಬಳಸುವುದಕ್ಕೂ ನಿಯಮಗಳ ಅಡ್ಡಿಯಿದೆ. ಇನ್ನೊಂದೆಡೆ ಸೌದೆ ಒಲೆಗಳನ್ನು ಬಳಸಲು ಬೇಕಾದಷ್ಟು ಜಾಗವೂ ಲಭ್ಯವಿಲ್ಲದ ಕಾರಣ ಹೋಟೆಲ್ ಮಾಲೀಕರು ದಿಕ್ಕೇ ತೋಚದ ಸ್ಥಿತಿಗೆ ತಲುಪಿದ್ದಾರೆ.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಈಗಾಗಲೇ ಹೋಟೆಲ್ ಬಂದಾಗಿವೆ. ಇನ್ನೂ ಕೆಲವು ಗೂಡಂಗಡಿಯವರು ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಗೃಹಬಳಕೆಯ ಸಿಲಿಂಡರ್ ಬಳಸುತ್ತಿದ್ದ ಅಂಗಡಿಯವರು ಅಧಿಕಾರಿಗಳ ಭಯಕ್ಕೆ ಅದನ್ನು ಬಳಕೆ ಮಾಡದೆ ಅಂಗಡಿ ಬಂದ್ ಮಾಡಿದ್ದಾರೆ. ಇನ್ನೂ ಕೆಲವರು ಮನೆಯಿಂದ ಸೀಮಿತವಾದ ತಿಂಡಿ ತಯಾರಿಸಿಕೊಂಡು ಬಂದು ವ್ಯಾಪಾರ ಮಾಡುತ್ತಿದ್ದಾರೆ.

ಈ ತಿಂಗಳಿನಲ್ಲಿ ಹಲವು ರಜೆ ಬಂದಿದೆ. ಶನಿವಾರ ಮತ್ತು ರವಿವಾರ ಎರಡು ದಿನ ರಜೆ ಇದೆ. ರಜೆ ಕಾರಣದಿಂದ ಪ್ರವಾಸಿಗರ ಸಂಖ್ಯೆಯು ಹೆಚ್ಚಿದೆ. ಪ್ರವಾಸಿಗರಿಗೆ ಬೇಕಾದ ಊಟ ತಿಂಡಿ ಪೂರೈಕೆ ಮಾಡಲು ಹೋಟೆಲ್‌ನವರಿಗೆ ಸಿಲಿಂಡರ್ ಸಮಸ್ಯೆ ಕಾಡುತ್ತಿದೆ. ಇನ್ನೂ ಕೆಲವು ಹೋಟೆಲ್‌ನಲ್ಲಿ ಕಟ್ಟಿಗೆ ಒಲೆ ಉರಿಸುತ್ತಿರುವುದರಿಂದ ಹೋಟೆಲ್ ಪೂರ್ತಿ ಹೋಗೆ ತುಂಬಿಕೊಂಡಿದೆ.

ಹೋಟೆಲ್‌ಗಳು ಬಂದ್ ಆಗುತ್ತಿದ್ದಂತೆ ಸಿಬ್ಬಂದಿಗೂ ಸಂಕಷ್ಟ ಎದುರಾಗಿದೆ. ಸಂಪಾದನೆ ಇಲ್ಲದಿದ್ದರೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೆಲವು ಹೋಟೆಲ್ ಬಂದಾಗಿದ್ದು, ಅದರ ಸಿಬ್ಬಂದಿ ಖಾಲಿ ಇರುವಂತೆ ಆಗಿದೆ. ಒಂದೆರಡು ದಿನ ಆದರೆ ಮಾಲೀಕ ಸಂಬಳ ಕೊಡಬಹುದು, ಹೀಗೆ ಮುಂದುವರಿದರೆ ಮಾಲೀಕರಿಗೂ ಸಂಬಳ ಕೊಡುವುದು ಕಷ್ಟವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ದರ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ನಮ್ಮೂರ ಸರ್ಕಾರಿ ಶಾಲೆ ಉಳಿಸಿ: ಎಐಎಸ್‌ಎಫ್‌ ಹೋರಾಟ