ಗೊಬ್ಬರ ಕೊರತೆ, ರಾಗಿ ಬೆಂಬಲ ಬೆಲೆ ಹಣ ಬಾಕಿ: ಕೃಷ್ಣೇಗೌಡ

KannadaprabhaNewsNetwork |  
Published : Jul 17, 2026, 01:45 AM IST
16ಎಚ್ಎಸ್ಎನ್16 :  | Kannada Prabha

ಸಾರಾಂಶ

ಕಳೆದ ವರ್ಷದ ನೆರೆ ಹಾವಳಿಯಿಂದ ಸಾವಿರಾರು ತೆಂಗು ಹಾಗೂ ಅಡಿಕೆ ಮರಗಳು ಹಾನಿಗೊಳಗಾಗಿದ್ದರೂ ಅನೇಕ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದೇ ರೀತಿ ಬೆಂಕಿ ಅವಘಡ, ಮಳೆ ಹಾನಿ ಹಾಗೂ ಇತರ ಪ್ರಕೃತಿ ವಿಕೋಪಗಳಿಂದ ಬೆಳೆ ಕಳೆದುಕೊಂಡ ರೈತರೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಮೆಕ್ಕೆಜೋಳ ಮತ್ತು ಜೋಳ ಬೆಳೆಗಾರರಿಗೂ ಸೂಕ್ತ ಪರಿಹಾರ ಹಾಗೂ ಬೆಂಬಲ ಸಿಗದಿರುವುದರಿಂದ ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆ, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಹಣದ ಬಾಕಿ, ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ವಿತರಣೆಯ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಶಕ್ತಿ ಸಂಘಟನೆ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ನಾಗೇನಹಳ್ಳಿ ನೇತೃತ್ವದ ಪ್ರತಿಭಟನೆ ಎನ್. ಆರ್‌. ವೃತ್ತಕ್ಕೆ ತೆರಳಿ ಮಾನವ ಸರಪಳಿ ನಡೆಸಿ ಕೆಲ ಸಮಯ ರಸ್ತೆ ಮಧ್ಯೆ ಕುಳಿತು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಮುಂಗಾರು ಹಂಗಾಮಿನ ಬಿತ್ತನೆ ಅವಧಿಯಲ್ಲಿ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ದೊರೆಯುತ್ತಿಲ್ಲ. ಸಹಕಾರ ಸಂಘಗಳು ಮತ್ತು ಖಾಸಗಿ ಗೊಬ್ಬರ ಮಾರಾಟ ಮಳಿಗೆಗಳಲ್ಲಿ ಯೂರಿಯಾ ಖರೀದಿಸಲು ತೆರಳುವ ರೈತರಿಗೆ, ಯೂರಿಯಾ ಜೊತೆಗೆ ಬೇರೆ ಗೊಬ್ಬರವನ್ನು ಕಡ್ಡಾಯವಾಗಿ ಖರೀದಿಸಿದರೆ ಮಾತ್ರ ಯೂರಿಯಾ ನೀಡಲಾಗುತ್ತಿದೆ. ರೈತರಿಗೆ ಅಗತ್ಯವಿರುವ ಗೊಬ್ಬರವನ್ನು ಮಾತ್ರ ನೀಡದೇ ಬಲವಂತದ ಜೋಡಣೆ ಮಾರಾಟ ಮಾಡುತ್ತಿರುವುದು ನಿಯಮಬಾಹಿರವಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಬೇಕಾದ ಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ಪೂರೈಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಗೊಬ್ಬರ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ವ್ಯವಸ್ಥೆಯ ಮೂಲಕ ರೈತರಿಂದ ಖರೀದಿಸಲಾದ ರಾಗಿಯ ಹಣವನ್ನು ಮೂರು ತಿಂಗಳಾದರೂ ಪಾವತಿಸದಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ದೂರಿದರು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಹಣ ಸಿಗದೇ ರೈತರು ಸಾಲದ ಮೊರೆ ಹೋಗುವಂತಾಗಿದೆ. ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂಬ ಉತ್ತರ ಮಾತ್ರ ನೀಡಲಾಗುತ್ತಿದೆ. ರೈತರ ಬೆವರಿನ ಬೆಲೆಯನ್ನು ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ಎಲ್ಲಾ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷದ ನೆರೆ ಹಾವಳಿಯಿಂದ ಸಾವಿರಾರು ತೆಂಗು ಹಾಗೂ ಅಡಿಕೆ ಮರಗಳು ಹಾನಿಗೊಳಗಾಗಿದ್ದರೂ ಅನೇಕ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದೇ ರೀತಿ ಬೆಂಕಿ ಅವಘಡ, ಮಳೆ ಹಾನಿ ಹಾಗೂ ಇತರ ಪ್ರಕೃತಿ ವಿಕೋಪಗಳಿಂದ ಬೆಳೆ ಕಳೆದುಕೊಂಡ ರೈತರೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಮೆಕ್ಕೆಜೋಳ ಮತ್ತು ಜೋಳ ಬೆಳೆಗಾರರಿಗೂ ಸೂಕ್ತ ಪರಿಹಾರ ಹಾಗೂ ಬೆಂಬಲ ಸಿಗದಿರುವುದರಿಂದ ರೈತ ಸಮುದಾಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೇಳಿದರು.

ಕೃಷಿ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ರೈತರಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ಗೊಬ್ಬರ, ಬೀಜ, ಬೆಳೆ ವಿಮೆ, ಪರಿಹಾರ ಹಾಗೂ ಬೆಳೆ ಖರೀದಿ ಹಣದಂತಹ ಮೂಲಭೂತ ವಿಷಯಗಳಲ್ಲಿಯೇ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾಡಳಿತ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಸಭೆ ನಡೆಸಿ ಗೊಬ್ಬರ ಪೂರೈಕೆಯನ್ನು ಸುಗಮಗೊಳಿಸಬೇಕು. ರಾಗಿ ಖರೀದಿ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ನೆರೆ ಮತ್ತು ಇತರ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ವಿಳಂಬವಿಲ್ಲದೆ ಪರಿಹಾರ ವಿತರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಶಕ್ತಿ ಸಂಘಟನೆಯ ಸಂಸ್ಥಾಪಕ ದಯಾನಂದ ನಾಗೇನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ, ಯುವ ಘಟಕದ ಅಧ್ಯಕ್ಷ ನಿತಿನ್ ಗೌಡ, ಜಂಟಿ ಕಾರ್ಯದರ್ಶಿ ಲೋಕೇಶ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ
ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ