ಸಮಾಜಿ ವಿರೋಧಿಗಳ ವಿರುದ್ಧ ಪೌರುಷ ತೋರಿಸಿ: ಶ್ರೀಕಾಂತ ಆಕ್ರೋಶ

KannadaprabhaNewsNetwork | Published : May 14, 2024 1:07 AM

ಸಾರಾಂಶ

ಬಾಗಲಕೋಟೆ: ನಗರದಲ್ಲಿ ಈಚೆಗೆ ಹಿಂದೂ ಜಾಗರಣ ವೇದಿಕೆ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದನ್ನು ಖಂಡಿಸಿ ನವನಗರದ ನಗರಸಭೆ ಎದುರು ಸೋಮವಾರ ಆಯೋಜಿಸಿದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದಲ್ಲಿ ಈಚೆಗೆ ಹಿಂದೂ ಜಾಗರಣ ವೇದಿಕೆ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದವರ ವಿರುದ್ಧ ನಿಮ್ಮ ಪೌರುಷ ತೋರಿಸಿ ವಿನಃ ಧರ್ಮಕ್ಕಾಗಿ ಹೋರಾಡುವ ಹಿಂದೂಗಳ ಮೇಲಲ್ಲ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಶ್ರೀಕಾಂತ ಹೊಸಕೇರಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂಜಾವೇ ಮುಖಂಡರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ನವನಗರದ ನಗರಸಭೆ ಎದುರು ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪೊಲೀಸರು ತಾವು ಸಹ ಹಿಂದುಗಳೆಂದು ಮರೆಯಬೇಡಿ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಬಂದು ನಿಲ್ಲುವವರು ನಾವೇ ಎನ್ನುವುದು ನಿಮ್ಮ ಗಮನದಲ್ಲಿರಲಿ ಎಂದರು.

ಬಿಟಿಡಿಎ ಮಾಜಿ ಸಭಾಪತಿ, ಬಿಜೆಪಿ ಹಿರಿಯ ಮುಖಂಡ ಜಿ.ಎನ್. ಪಾಟೀಲ ಮಾತನಾಡಿ, ಅನವಶ್ಯಕವಾಗಿ ಹಿಂದೂಪರ ಸಂಘಟನೆಗಳ ಮುಖಂಡರ ಮೇಲೆ ಹಲ್ಲೆ ಮಾಡಿರುವ ಪೊಲೀಸರ ವರ್ತನೆ ಖಂಡನೀಯ. ಹಿಂದೂಗಳ ರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕಿದೆ ಎಂದು ಕರೆ ನೀಡಿದರು.

ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಧಿಕಾರಿಗಳು ರಾಜಕಾರಣಿಗಳ ಮಾತು ಕೇಳಬೇಡಿ. ರಾಜಕಾರಣಿಗಳ ಅಧಿಕಾರ 5 ವರ್ಷ ಮಾತ್ರ. ನಿಮ್ಮ ಅಧಿಕಾರ 60 ವರ್ಷ. ಪೊಲೀಸರು ಅಮಾನುಷವಾಗಿ ವರ್ತಿಸುವುದನ್ನು ಬಿಡಬೇಕು. ಹಿಂದೂಗಳು ಇಂತಹ ಘಟನೆಗಳನ್ನು ನೋಡಿಯಾದರೂ ಒಗ್ಗಟ್ಟಾಗಬೇಕಿದೆ. ಇಲ್ಲದಿದ್ದರೆ ನಮ್ಮ ದೇಶದ ಸ್ಥಿತಿ ಹೇಳದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳು ಕ್ಷಮೆಯಾಚಿಸಬೇಕು ಹಾಗೂ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಅಮರೇಶ ಪಮ್ಮಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಹಿಂಜಾವೇ ಮುಖಂಡರಾದ ಕಿರಣ ಪವಾಡಶೆಟ್ಟರ, ಅಯ್ಯನಗೌಡ ಹೆರೂರ, ಯಲ್ಲಪ್ಪ ಭಜಂತ್ರಿ, ವಿಕ್ರಂ ದೇಶಪಾಂಡೆ, ಮಹಾಂತೇಶ ಕೋಟಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಬಿಜೆಪಿ ಮುಖಂಡ ಬಸವರಾಜ ಯಂಕಂಚಿ, ಜಯಂತ ಕುರಂದವಾಡ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸೇರಿದಂತೆ ಇತರರಿದ್ದರು.

Share this article