ಕನ್ನಡಪ್ರಭ ವಾರ್ತೆ ಉಡುಪಿ
ಸಾಂಪ್ರದಾಯಿಕ ಪುಷ್ಪಾ ಅಂಜಲಿ ನೃತ್ಯದೊಂದಿಗೆ ಹೆಜ್ಜೆ ಹಾಕಿದ ಶ್ರದ್ಧಾ ಅವರು ತಿಲ್ಲಾನದೊಂದಿಗೆ ಕೊನೆಗೊಳಿಸಿದರು. ನಡುವೆ ಪ್ರದರ್ಶಿಸಿದ ‘ಆಡಿಸಿದಳೇ ಯಶೋಧ ಜಗದೋದ್ಧಾರನ’ ಮತ್ತು ‘ದುರ್ಗೆ’ ನೃತ್ಯವು ಪ್ರೇಕ್ಷಕರನ್ನು ಕಣ್ಮನ ಮುದಗೊಳಿಸಿತು.
ಕೀಳಂಜೆ ಕೃಷ್ಣರಾಜ ಭಟ್ - ವಸುಧಾ ಭಟ್ ದಂಪತಿಯ ಸುಪುತ್ರಿ ಶ್ರದ್ಧಾ ಭಟ್, ಪ್ರಸ್ತುತ ಉಡುಪಿಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಗುರುಗಳಾದ ನೃತ್ಯವಿದುಷಿ ವೀಣಾ ಸಾಮಗ ಅವರ ಬಳಿ ನೃತ್ಯಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಚಿಕ್ಕಂದಿನಿಂದಲೂ ನೃತ್ಯದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ ಅವರು, 500ಕ್ಕೂ ಹೆಚ್ಚು ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದಲ್ಲಿಯೂ ಹಲವು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಶ್ರದ್ಧಾ, ಉಷಾ ಹೆಬ್ಬಾರ್ ಅವರಲ್ಲಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದು, ಶಾಸ್ತ್ರೀಯ ಸಂಗೀತ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಅನೇಕ ಲಘುಶಾಸ್ತ್ರೀಯ ನೃತ್ಯಕ್ಕೆ ನಿರ್ದೇಶನ ನೀಡಿರುವುದಲ್ಲದೆ, ನಾಟಕಗಳಲ್ಲಿಯೂ ಅಭಿರುಚಿಯನ್ನು ಹೊಂದಿರುತ್ತಾರೆ.