ಶಿವಮೊಗ್ಗ: ಶ್ರೀ ಮುರುಘ ರಾಜೇಂದ್ರ ಮಹಾ ಸಂಸ್ಥಾನಮಠ ಟ್ರಸ್ಟ್, ಗುರುಬಸವ ಅಧ್ಯಯನ ಪೀಠದ ಸಹಯೋಗದಲ್ಲಿ ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜು.29ರಿಂದ ಆಗಸ್ಟ್ 23ರವರೆಗೆ ಮನೆ ಮನೆಗಳಲ್ಲಿ ಶ್ರಾವಣ ಚಿಂತನಾ ಕಾರ್ಯಕ್ರಮದ ಅಂಗವಾಗಿ ಸಮಾಜಮುಖಿ ಸೇವೆಯ ಮಠಾಧೀಶರರು, ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ರೇಣುಕಾರಾಧ್ಯ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.29ರಿಂದ ಆಗಸ್ಟ್ 23ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಚಿಂತನಾ ಸಭೆ ನಡೆಯುವ ವಿವಿಧ ಸ್ಥಳಗಳಲ್ಲಿ ವಚನ ಸಂಗೀತ, ಅಲ್ಲಮ ರಂಗವಚನ ರೂಪಕ, ಉಪನ್ಯಾಸ, ಸಂವಾದ, ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ ಎಂದರು.ಜು.29ರ ಸಂಜೆ 6.30ಕ್ಕೆ ಬೆಕ್ಕಿನಕಲ್ಮಠದಲ್ಲಿ ಶ್ರಾವಣ ಚಿಂತನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಕ್ಕಿನ ಕಲ್ಮಠ ಶ್ರೀಗಳು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶಾಸಕ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಎಸ್.ರುದ್ರೇಗೌಡ, ಮಾಜಿ ಜಿ.ಪಂ. ಸದಸ್ಯ ಕೆ.ಈ.ಕಾಂತೇಶ್ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿರುವರು. ಅಭಿಯಂತರ ಬಾರಂದೂರು ಪ್ರಕಾಶ್ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರೀಗೆ ಗುರುರಕ್ಷೆ ನೀಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುತ್ ಇಲಾಖೆ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ.ಶಶಿಧರ್ ವಹಿಸುವರು ಎಂದು ಮಾಹಿತಿ ನೀಡಿದರು.ಜು.30 ರಿಂದ ಆಗಸ್ಟ್ 22ರವರೆಗೆ ನಗರದ ವಿವಿಧ ಬಡಾವಣೆಗಳ ಸೇವಾಕರ್ತರ ಮನೆಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಆ.23ರಂದು ಸಮಾರೋಪ ಸಮಾರಂಭ, ವಿನಾಯಕ ನಗರದಲ್ಲಿರುವ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಆ.9ರಂದು 551ನೇ ಮಾಸಿಕ ಶಿವಾನುಭವಗೋಷ್ಠಿ ಕಲ್ಲಹಳ್ಳಿಯ ಸನ್ನಿಧಿ ಮನೆ ನಂಬರ್ 121ರಲ್ಲಿ ನಡೆಯಲಿದ್ದು, ಬೆಕ್ಕಿನ ಕಲ್ಮಠ ಶ್ರೀಗಳು ಇದರ ಸಾನ್ನಿಧ್ಯವಹಿಸಲಿದ್ದು, ಶ್ರೀ ಚಿದಾನಂದ ಸ್ವಾಮಿ ಸಿ.ಹಿರೇಮಠ್ ಉಪನ್ಯಾಸ ನೀಡುವರು ಎಂದು ವಿವರಿಸಿದರು.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು, ಸಾರ್ವಜನಿಕರು ಮತ್ತು ಚಿಂತನಾ ಸಭೆ ನಡೆಯುವ ಆಯಾ ಸ್ಥಳಗಳ ಸಾರ್ವಜನಿಕರು, ಸಮಾಜ ಬಾಂಧವರು ಆಗಮಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಹರ್ಷಾ ಬಿ.ಕಾಮತ್, ಪ್ರಕಾಶ್, ಅನಿತಾ ರವಿಶಂಕರ್, ಬಳ್ಳೇಕೆರೆ ಸಂತೋಷ್, ಎಸ್.ಪಿ. ದಿನೇಶ್, ಮೋಹನ್‌ಕುಮಾರ್ ಸೇರಿದಂತೆ ಹಲವರಿದ್ದರು.