ಗದಗ: ಜಿಲ್ಲೆಯಾದ್ಯಂತ ಕಡೆ ಶ್ರಾವಣ ಸೋಮವಾರದ ಸಂಭ್ರಮ ಮನೆ ಮಾಡಿತ್ತು.ಸೋಮವಾರ ಮತ್ತು ಶ್ರಾವಣ ಅಮಾವಾಸ್ಯೆ ಒಂದೇ ದಿನವೇ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿಶೇಷ ಪೂಜೆ, ದೇವರಿಗೆ ಅರ್ಚನೆ, ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಸಂಭ್ರಮಿಸಿದರು.
ಲಕ್ಕುಂಡಿಯಲ್ಲಿ ವಿಜೃಂಭಣೆಯ ಜಾತ್ರೆ
ಐತಿಹಾಸಿಕ ಲಕ್ಕುಂಡಿ ಗ್ರಾಮದ ಹಾಲಗೊಂಡ ಬಸವೇಶ್ವರ ರಥೋತ್ಸವದ ಅಂಗವಾಗಿ ಶ್ರಾವಣದ ಕೊನೆಯ ಸೋಮವಾರದ ಸಂಭ್ರಮ ಮನೆ ಮಾಡಿತ್ತು. ನಾಡಿನ ಶಿವಶರಣರ ಭಾವಚಿತ್ರ, ಮೂರ್ತಿಗಳ ವಿವಿಧ ಹೂವಿನ ಅಲಂಕಾರ ಮಂಟಪದಲ್ಲಿ ಮೆರವಣಿಗೆ, ಶರಣರ ವಚನ, ತತ್ವ ಪದಗಳ ಭಜನಾ ಕಲಾವಿದರ ಹಾಡುಗಾರಿಕೆ, ಒಂದೇ ಬಣ್ಣದ ಬಟ್ಟೆ ಧರಿಸಿ ಪಾಲ್ಗೊಂಡ ಭಜನಾ ಕಾರ್ಯಕರ್ತರು ಎಲ್ಲರ ಗಮನ ಸೆಳೆದರು.ಗ್ರಾಮದ 14 ಭಜನಾ ಸಂಘಗಳು ನಾಡಿನ ಶಿವ ಶರಣರ ತತ್ವಪದಗಳ ಹಾಡಿನೊಂದಿಗೆ ಭಾವಚಿತ್ರ ಮೆರವಣಿಗೆಯು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡಿದ್ದರು.ಅಲ್ಲಮಪ್ರಭುದೇವರ, ವಿರುಪಾಕ್ಷೇಶ್ವರ, ಮಾರುತಿ, ಜ ಪಂಚಾಚಾರ್ಯ, ರಾಮಲಿಂಗೇಶ್ವರ, ನಾಗನಾಥ, ಬಿನ್ನಾಳ ಬಸವೇಶ್ವರ, ಲೆಕ್ಕದ ವೀರೇಶ್ವರ, ಮಲ್ಲಿಕಾರ್ಜುನ, ಅನ್ನದಾನೀಶ್ವರ, ಮರುಳ ಸಿದ್ದೇಶ್ವರ ಹಾಗೂ ಆಂಜನೇಯ ಭಜನಾ ಸಂಘ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಇದಕ್ಕೂ ಪೂರ್ವ ವಿವಿಧ ಹೂವುಗಳಿಂದ ಅಲಂಕರಿಸಿದ ಬಸವಣ್ಣ ಮೂರ್ತಿಗೆ ವಿಶೇಷ ಪೂಜೆ ಜರುಗಿದವು. ಸಿದ್ಧ ಸಮಾಧಿ ಯೋಗ ಸಾಧಕರ ಆಶ್ರಯದಲ್ಲಿ ಆಚಾರ್ಯ ರಾಘವೇಂದ್ರ ಕೊಪ್ಪಳ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನೆರವೇರಿತು. ನಂತರ ಅನ್ನ ಅನ್ನಸಂತರ್ಪಣಿ ಜರುಗಿತು.
ನಮ್ಮ ಮನೆಯ ಆರಾಧ್ಯ ದೈವವಾಗಿರುವ ಹಾಲಗೊಂಡ ಬಸವಣ್ಣ ದೇವರ ಜಾತ್ರೆ ವಿಶೇಷವಾಗಿದೆ. ಎರಡು ದಿನ ಮುಂಚಿತವಾಗಿ ಬಂದು ಸೇವೆ ಸಲ್ಲಿಸುತ್ತೇನೆ ಎಂದು ಬಳ್ಳಾರಿ ನಿವಾಸಿ ಕೆ.ಬಸವರಾಜ ಹೇಳಿದ್ದಾರೆ.