ಶ್ರಾವಣದ ತೋರಣ ಬದುಕಿಗೆ ಹೂರಣ: ಹಿರೇಮಗಳೂರು ಕಣ್ಣನ್

KannadaprabhaNewsNetwork | Published : Sep 5, 2024 12:30 AM

ಸಾರಾಂಶ

ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಅದು ಹೂರಣವಿದ್ದಂತೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಅದು ಹೂರಣವಿದ್ದಂತೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯ ಪಟ್ಟಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ನೇತೃತ್ವದಲ್ಲಿ ನಗರದ ಗೌರಿಕಾಲುವೆ ಬಡಾವಣೆ ಗೌರಿ ರಂಗಮಂದಿರದಲ್ಲಿ ಆಯೋಜಿಸಿದ್ದ ’ಶ್ರಾವಣ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿಯ ಚಿಗುರಿನ ಸೌಂದರ್ಯ ಶ್ರಾವಣ ಮಾಸದ ಸೊಗಸು. ಇಡೀ ನಮ್ಮ ಭಾರತ ದೇಶದಲ್ಲಿ ಪ್ರಕೃತಿಯ ಉಪಾಸನೆಯೆ ಎಲ್ಲ ಹಬ್ಬಗಳ ಮೂಲದ್ರವ್ಯ. ಹಬ್ಬ ಗಳ ಮೂಲಕ ದೇವತಾ ಆರಾಧನೆ ಅನೂಚಾನವಾಗಿ ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿದೆ. ವಿವಿಧ ಪತ್ರೆ, ಪುಷ್ಪ, ಹಣ್ಣು ಇವೆಲ್ಲ ನಮ್ಮ ಹಬ್ಬಗಳಲ್ಲಿ ಕಾಲಕಾಲಕ್ಕೆ ಬಳಕೆಗೆ ಕಾರಣವಾಗುತ್ತದೆ ಎಂದರು.ವಿಜ್ಞಾನ ಬುದ್ಧಿಯಿಂದ, ತತ್ತ್ವಜ್ಞಾನದ ಮನಸ್ಸಿಗೆ ಕವಿ ಹೃದಯದಿಂದ ಆರಾಧಿಸುವ ಶ್ರಾವಣ ಕಟ್ಟಿದರೆ ತೋರಣ, ಬಡಿಸಿದರೆ ಹೂರಣ ಎಂದೇ ನೆನಪಿನಲ್ಲಿ ಉಳಿಯುತ್ತದೆ. ಶ್ರಾವಣ ಮಾಸ ಬಂತು, ಯಾಕೆ ಬಂತೂ, ಏನು ತಂತು...’ ’ಶ್ರಾವಣ ನೀನು ಬಂದ ಕಾರಣ..’ ’ಶ್ರಾವಣ ಬಂತು ನಾಡಿಗೆ ಬಂಡು ಬೀಡಿಗೆ...’ ಎಂಬ ಕಾವ್ಯಗಳನ್ನು ಉಲ್ಲೇಖಿಸಿದ ಹಿರೇಮಗಳೂರು ಕಣ್ಣನ್, ಶ್ರಾವಣದ ಸೊಗಸನ್ನು ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಕವಿಗಳೆಲ್ಲ ಸೊಗಸಾಗಿ ವರ್ಣಿಸಿದ್ದಾರೆಂದರು. ಶ್ರಾವಣದಲ್ಲಿ ಶ್ರವಣ ಪ್ರಧಾನ. ನಮ್ಮ ಮಕ್ಕಳಿಗೆ ಸದ್ವಿಚಾರ, ಪರಂಪರೆ, ಪದ್ಧತಿಗಳನ್ನು ಕಲಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಮನೆ ಒಗ್ಗೂಡಿದರೆ ಮನಸ್ಸುಗಳು ಒಗ್ಗೂಡುತ್ತವೆ. ದುಡಿದು ತಿನ್ನುವ ಸಂಸ್ಕೃತಿ ಒಳಿತು. ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು. ಕಾಯಾ, ವಾಚಾ, ಮನಸಾ ಪರಿಶುದ್ಧತೆಗೆ ಶ್ರಾವಣ ಮಾಸ ಪ್ರೇರಕ. ಬೇರುಗಳನ್ನು ಗಟ್ಟಿ ಗೊಳಿಸುವ ಅವಕಾಶ ಶ್ರಾವಣದಲ್ಲಿದೆ. ಸಾಹಿತ್ಯಕ್ಕೆ ಸಂವೇದನಾ ಶಕ್ತಿ ಇದೆ ಎಂಬುದನ್ನು ಮರೆಯಬಾರದು ಎಂದರು. ಮಹಿಳಾ ಪ್ರಕಾರದ ಜಿಲ್ಲಾ ಪ್ರಮುಖ್ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಶ್ರಾವಣ ಬಂದರೆ ಪ್ರಕೃತಿಯೆ ನಲಿಯುತ್ತದೆ. ಹಬ್ಬ ಗಳ ಮೆರವಣಿಗೆ ಆರಂಭವಾಗುತ್ತದೆ. ಶ್ರಾವಣ ಭಕ್ಷ್ಯ ಭೋಜನಕ್ಕೂ ಹೆಸರು ವಾಸಿ. ಪೂಜೆ, ಪಾರಾಯಣ ಮನೆ, ಮಠ, ಮಂದಿರಗಳಲ್ಲಿ ತಿಂಗಳ ಪೂರ್ತಿ ನಡೆಯುತ್ತವೆ. ಭಾರತದ ಧರ್ಮ ಪರಂಪರೆಯಲ್ಲಿ ಶ್ರಾವಣಮಾಸಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಭಾಸಾಪ ಜಿಲ್ಲಾಧ್ಯಕ್ಷ ಅರವಿಂದ ದೀಕ್ಷಿತ್ ಮಾತನಾಡಿ, ಶ್ರಾವಣ ಮಾಸದಲ್ಲಿ ಒಳ್ಳೆಯನ್ನು ಹೇಳುವುದು ಮತ್ತು ಕೇಳುವುದು ಈ ಮಾಸದ ಸಂದೇಶ. ನಗು ಸಹಜ ಧರ್ಮವಾಗಬೇಕು. ಮಲ್ಲಿಗೆ ಮೃದು ಅನ್ನ, ಘಮ ಘಮಿಸುವ ತುಪ್ಪ, ಮಿಡಿ ಉಪ್ಪಿನಕಾಯಿ, ತಿಳಿಸಾರು, ಕೆನೆ ಮೊಸರು, ಹಲಸಿನ ಹಪ್ಪಳ, ಬಡಿಸುವವಳ ಬಳೆಗಳ ಸದ್ದು, ಇನಿದನಿ, ಹೊರಗೆ ಶ್ರಾವಣದ ಮಳೆಹನಿ... ನಿಜ ಸ್ವರ್ಗ ಮೇಲಿಲ್ಲ, ಇದ್ದರೂ ನನಗದು ಬೇಕಿಲ್ಲ ಎಂದು ಕಾವ್ಯ ಮಯವಾಗಿ ಬಣ್ಣಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶೃಂಗೇರಿ ವಿಭಾಗೀಯ ಸಂಯೋಜಕ ಪ್ರಭುಲಿಂಗಶಾಸ್ತ್ರಿ, ತಾಲೂಕು ಉಪಾಧ್ಯಕ್ಷ ಕುಮಾರಸ್ವಾಮಿ, ನಾಗಶ್ರೀ, ಗೌರಿ ಮಹಿಳಾ ಮಂಡಳಿಯ ಮುಖ್ಯಸ್ಥೆ ಶಾರದಮ್ಮ ಇತರರು ಇದ್ದರು.

Share this article