ವರ್ಷಕ್ಕೊಮ್ಮೆ ನಡೆಯಲಿರುವ ವಿಶೇಷ ಪೂಜೆ । ದೇವಿಯ ದರ್ಶನ ಪಡೆದು ಪಾವನರಾದ ಭಕ್ತರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ದೇವಿರಮ್ಮ ಬೆಟ್ಟವನ್ನು ಈ ಬಾರಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಏರಿದರು.ಹಸಿರು ಬೆಟ್ಟದಲ್ಲಿ ಜನರ ಸಾಲು ದೂರದಿಂದ ನೋಡಿದವರ ಕಣ್ಮನ ಸೆಳೆಯಿತು. ಚಿಕ್ಕಮಗಳೂರು ತಾಲೂಕು ಬಿಂಡಿಗ ಮಲ್ಲೇನಹಳ್ಳಿಯಲ್ಲಿರುವ ದೇವೀರಮ್ಮ ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುತ್ತಿದ್ದು, ದೇವಿಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬರಿಗಾಲಲ್ಲೇ ಬೆಟ್ಟವನ್ನೇರುವ ಮೂಲಕ ದೀವಿಯ ದರ್ಶನ ಪಡೆದು ಪಾವನರಾದರು.
ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರಿಂದ ದೇವರ ದರ್ಶನವಾಯಿತು. ಈ ಬಾರಿ ಭಕ್ತರ ಸಂಖ್ಯೆ ಏರಿಕೆಗೆ ಪ್ರಮುಖವಾದ ಕಾರಣ, ಕಳೆದ ವರ್ಷದಂತೆ ಈ ಬಾರಿ ಮಳೆ ಇರಲಿಲ್ಲ. ಮಳೆ ಬಂದಿದ್ದರೆ, ಅಪಾಯ ಹೆಚ್ಚು. ಹಾಗಾಗಿ ಪೂರಕವಾದ ವಾತಾವರಣ ಇತ್ತು. ಮೂರು ಸಾವಿರ ಅಡಿಗಳ ಎತ್ತರವಿರುವ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನವರ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಹರಿದು ಬಂದರು. ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಭಾನುವಾರ ಬೆಳಗಿನ ಜಾವದಿಂದಲೇ ಬೆಟ್ಟವನ್ನೇರುವುದಕ್ಕೆ ಭಕ್ತರು ಮುಂದಾದರು. ಮಳೆ ಬಾರದಿರುವುದರಿಂದ ಬೆಟ್ಟವನ್ನೇರಲು ಯಾವುದೇ ತೊಂದರೆಯಾಗಲಿಲ್ಲ. ರಾತ್ರಿ ಒಂದು ಗಂಟೆಯಿಂದಲೇ ಭಕ್ತರು ದೇವೀರಮ್ಮನ ಬೆಟ್ಟವನ್ನು ಹತ್ತಲು ಆರಂಭಿಸಿದರು. ಮಧ್ಯಾಹ್ನ 3 ಗಂಟೆಯವರೆಗೆ ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದರು. ಬರಿಗಾಲಲ್ಲಿ ಬೆಟ್ಟ ಹತ್ತುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕಣ್ಣು ಹಾಯಿಸಿದರೆ ಬೆಟ್ಟದ ತುಂಬೆಲ್ಲಾ ಜನವೋ ಜನ ಕಾಣಿಸುತಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸರ್ಕಾರಿ ಬಸ್‌ಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿ ಅಲ್ಲಿಂದ ಬೆಟ್ಟವನ್ನೇರಿ ದೇವಿಯನ್ನು ಕಣ್ತುಂಬಿಕೊಂಡರು. ಮಾಜಿ ಸಚಿವ ಸಿ.ಟಿ.ರವಿ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರು ಬರಿಗಾಲಿನಲ್ಲಿಯೇ ಬೆಟ್ಟವನ್ನು ಹತ್ತಿ ದೇವೀರಮ್ಮ ದರ್ಶನ ಪಡೆದುಕೊಂಡರು. ಬೆಟ್ಟವನ್ನು ಹತ್ತಿ ಬಂದ ಭಕ್ತರಿಗೆ ಕುಡಿಯುವ ನೀರು ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಭಕ್ತರಿಗೆ ಅನುಕೂಲವಾಗುವಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸುಮಾರು ಒಂದು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.ಇದೇ ಮೊದಲ ಬಾರಿಗೆ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿತ್ತು. ಚೂಡಿದಾರ ಮತ್ತು ಸೀರೆಯನ್ನು ಉಟ್ಟು ಬೆಟ್ಟವನ್ನು ಹತ್ತಿದರು. ದೇವೀರಮ್ಮ ದರ್ಶನವನ್ನು ಪಡೆದುಕೊಂಡರು. 12 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ಇರುವ ದೇವಿರಮ್ಮ ಬೆಟ್ಟವನ್ನು ಸಾವಿರರು ಭಕ್ತರು ಭಾನುವಾರ ಏರಿದರು.--- 12 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ದೇವಿರಮ್ಮ ಬೆಟ್ಟವನ್ನು ಶಾಸಕ ಎಚ್.ಡಿ. ತಮ್ಮಯ್ಯ ಏರಿದರು.