ಕನ್ನಡಪ್ರಭ ವಾರ್ತೆ ಹರಿಹರ
ಕೋಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ದಡದಲ್ಲಿ ಮೇ ೨೦ ಮತ್ತು ೨೧ರಂದು ಪಂಚಮ ವರ್ಷ ವರ್ಧಂತಿ ಉತ್ಸವ ಹಾಗೂ ಶ್ರೀ ದುರ್ಗಾದೇವಿಯ ನೂತನ ಉತ್ಸವ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮದರ್ಶಿ ಅಪ್ಪಾಜಿ ಮಂಜುನಾಥ್ ಹೇಳಿದರು.ನಗರಕ್ಕೆ ಸಮೀಪದ ತುಂಗಭದ್ರಾ ನದಿ ದಡದ ಬಳಿಯ ಶ್ರೀ ಮೂಲ ದುರ್ಗಾ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೇ ೨೦ರಂದು ಸಂಜೆ ೪ ಗಂಟೆಯಿಂದ ಕೋಡಿಯಾಲ ಹೊಸಪೇಟೆ ಗ್ರಾಮದ ಶ್ರೀ ದುಂಡಿ ಬಸವೇಶ್ವರ ದೇವಸ್ಥಾನದಿಂದ ಶ್ರೀ ದುರ್ಗಾದೇವಿಯ ನೂತನ ಉತ್ಸವ ಮೂರ್ತಿಯನ್ನು ಆನೆ ಅಂಬಾರಿ ಮೇಲೆ ಡೋಲು, ಬಾಜಾಭಜಂತ್ರಿ, ಕುಂಭಮೇಳದ ವಿಶೇಷ ಮೆರವಣಿಗೆ ಮೂಲಕ ಮೂಲ ದುರ್ಗಾದೇವಿ ಸನ್ನಿಧಿಗೆ ಕರೆತರಲಾಗುವುದು ಎಂದರು.
ಅನಂತರ ಉಡುಪಿಯ ಜ್ಯೋತಿಷ್ಯರಾದ ಕೆ.ಎಸ್. ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಉತ್ಸವ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಹೋಮ ಇತ್ಯಾದಿ ಪೂಜಾ ಕೈಕರ್ಯಗಳನ್ನು ನೆರವೇರಿಸಲಾಗುವುದು. ಭಕ್ತರಿಗೆ ರಾತ್ರಿ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಮೇ ೨೧ರಂದು ಬೆಳಗ್ಗೆ ೮.೩೦ರಿಂದ ಆದ್ಯ ಗಣಯಾಗ ಪಂಚವಿಂಶತಿ ಕಲಶ ಪ್ರಧಾನ ಯಾಗ, ಕಲಶಾಭಿಷೇಕ, ಶ್ರೀ ಚಂಡಿಕಾ ಯಾಗ ಮಹಾಪೂಜೆಗಳು ನಡೆಯಲಿವೆ. ಸಂಜೆ ೫ ರಿಂದ ಶ್ರೀ ನಾಗದೇವತೆಯರಿಗೆ ನಾಗತನು ತರ್ಪಣ, ಆಶ್ಲೇಷ ಬಲಿಪೂಜಾ ಇತ್ಯಾದಿಗಳು ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮೂಲದುರ್ಗಾದೇವಿ ಟ್ರಸ್ಟ್ ಖಜಾಂಚಿ ಪಾರ್ವತಮ್ಮ ಕರಡಪ್ಪನವರ್, ಟ್ರಸ್ಟಿ ಇಂದೂಧರ ಸ್ವಾಮಿ, ಕಂಚಿಕೇರಿ ಕರಬಸಪ್ಪ, ವೀರೇಶ್ ಅಜ್ಜಣ್ಣನವರ ಮತ್ತಿತರರು ಉಪಸ್ಥಿತರಿದ್ದರು.- - - -೧೫ಎಚ್‌ಆರ್‌ಆರ್೨:
ಹರಿಹರ ಸಮೀಪದ ತುಂಗಭದ್ರಾ ನದಿ ದಡದಲ್ಲಿರುವ ಶ್ರೀ ಮೂಲದುರ್ಗಾ ದೇವಸ್ಥಾನದಲ್ಲಿ ಧರ್ಮದರ್ಶಿ ಅಪ್ಪಾಜಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟ್ರಸ್ಟಿಗಳು ಇದ್ದರು.