ವಿಜೃಂಭಣೆಯಿಂದ ನೆರವೇರಿದ ಶ್ರೀ ಶರಣಬಸವೇಶ್ವರ ರಥೋತ್ಸವ

KannadaprabhaNewsNetwork | Updated : Dec 23 2023, 01:47 AM IST

ಸಾರಾಂಶ

ಕೂಡ್ಲಿಗಿ ತಾಲೂಕಿನ ಕಾನಾಮಡಗು ದಾಸೋಹ ಮಠದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಶ್ರೀ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಕೂಡ್ಲಿಗಿ: ತಾಲೂಕಿನ ಕಾನಾಮಡಗು ದಾಸೋಹ ಮಠದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ಶ್ರೀ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.ಶ್ರೀ ಶರಣಬಸವೇಶ್ವರ ಸ್ವಾಮಿಯ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ರಥದ ಬಳಿಗೆ ತಂದು ಪ್ರದಕ್ಷಿಣೆ ಹಾಕಲಾಯಿತು. ಆನಂತರ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರ ನೇತೃತ್ವದಲ್ಲಿ ಮುಷ್ಟೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ದೈವಸ್ಥರ ಸಮ್ಮುಖದಲ್ಲಿ ಪೂಜಾ ವಿಧಿ, ವಿಧಾನಗಳನ್ನು ನೆರವೇರಿಸಿ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಆನಂತರ ರಥ ಎಳೆಯುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಶ್ರೀ ಶರಣಬಸವೇಶ್ವರ ಮಹಾರಾಜ್‌ಕೀ ಜೈ ಎಂದು ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದರು. ಶ್ರೀ ಶರಣಪ್ಪ ಸ್ವಾಮಿಯ ಮುಕ್ತಿ ಪಟವನ್ನು ಭಕ್ತ ಡಿ.ಎಸ್. ಶರಣಪ್ಪ ಅವರು ₹1 ಲಕ್ಷಕ್ಕೆ ಹರಾಜಿನಲ್ಲಿ ಪಡೆದರು. ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಜಗಳೂರು ಶಾಸಕ ದೇವೇಂದ್ರಪ್ಪ, ಹರಪನಹಳ್ಳಿಯ ಕೋಡಿಹಳ್ಳಿ ಭೀಮಣ್ಣ ಹಾಜರಿದ್ದರು. ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಆಂಧ್ರಪ್ರದೇಶ ಹಾಗೂ ಕಾನಾಮಡಗು ಗ್ರಾಮದ ಸುತ್ತಮುತ್ತಲ ಹಳ್ಳಿಗಳ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು. ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಎರಿಯಪ್ಪ ಅಂಗಡಿ ನೇತೃತ್ವದಲ್ಲಿ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.ರಕ್ತದಾನ ಶಿಬಿರ, ಸಾಮೂಹಿಕ ವಿವಾಹ: ಕಾನಾಮಡುಗು ಶ್ರೀ ಶರಣಬಸವೇಶ್ವರ ಕಾರ್ತಿಕೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ರಥೋತ್ಸವಕ್ಕೂ ಮುನ್ನ ರಕ್ತದಾನ ಶಿಬಿರ ನಡೆಯಿತು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೩ ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆನಂತರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಸಪೇಟೆ ಅಂಜಲಿ ಭರತನಾಟ್ಯ ಕೇಂದ್ರದ ವಿದ್ಯಾರ್ಥಿಗಳ ನೃತ್ಯ ವೈಭವ ಮನಸೂರೆಗೊಂಡಿತು.

Share this article