ಆರ್ಜಿ: ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಶೋಭಾಯಾತ್ರೆ

KannadaprabhaNewsNetwork | Published : Dec 28, 2024 1:00 AM

ಸಾರಾಂಶ

ಆರ್ಜಿ ಗ್ರಾಮದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಗುರುವಾರ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ಮಹೋತ್ಸವ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಆರ್ಜಿ ಗ್ರಾಮದ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಗುರುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಗ್ಗೆ ಗಣಪತಿ ಹೋಮದೊಂದಿಗೆ ಪೂಜಾ ಮಹೋತ್ಸವ ಆರಂಭವಾಯಿತು. ಬಳಿಕ ಶ್ರೀ ಅಯ್ಯಪ್ಪನ ಭಜನೆ ನಡೆಯಿತು. ಮಧ್ಯಾಹ್ನ ಶ್ರೀ ಸ್ವಾಮಿಗೆ ಮಹಾಪೂಜೆ ಸಲ್ಲಿಕೆಯಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಜನಾ ಮಂದಿರಲ್ಲಿ ದೀಪಾರಾಧನೆ ನಡೆಯಿತು. ಶ್ರೀ ಸ್ವಾಮಿಯ ಭಾವಚಿತ್ರವಿರಿಸಿದ ಪಲ್ಲಕ್ಕಿಯೋಂದಿಗೆ ಅಯ್ಯಪ್ಪ ಮಾಲಧಾರಿಗಳು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ದೀಪ ಹೊತ್ತು ಸಾಗಿದರು. ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಬೇಟೆಗೆ ಹೊರಡುವ ವಿರಾಟ್ ರೂಪದ ಸ್ತಬ್ಧ ಚಿತ್ರವು ಶೋಭಯಾತ್ರೆಯ ಪ್ರಮುಖ ಆಕರ್ಷಣೆಯಾಯಿತು. ಕೇರಳದ ಚೆಂಡೆ ಮೇಳ ಮೆರವಣಿಗೆಗೆ ಸಾಥ್‌ ನೀಡಿತು.

ಶೋಭಾಯಾತ್ರೆಯು ಭಜನಾ ಮಂದಿರದಿಂದ ಹೊರಟು ಪೊಲೀಸ್‌ ತಪಾಸಣೆ ಕೇಂದ್ರದ ಬಳಿಯ ಜಂಕ್ಷನ್ ವರೆಗೆ ತೆರಳಿ ಹಿಂತಿರುಗಿ ಬಳಿಕ ಬಾಳೂಗೋಡು ಚಾಮಂಡಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನಾ ಮಂದಿರಯಲ್ಲಿ ಕೊನೆಗೊಂಡಿತು. ಆಡಳಿತ ಮಂಡಳಿ, ದಾನಿಗಳಿಂದ ಸುಡುಮದ್ದು ಪ್ರದರ್ಶನ ನಡೆಯಿತು. ಭಜನ ಮಂದಿರದಲ್ಲಿ ಗುರುಸ್ವಾಮಿ ನೇತೃತ್ವದಲ್ಲಿ ಪಡಿಪೂಜೆ ನಡೆಯಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಶಿವಪ್ಪ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪೆರುಂಬಾಡಿ, ಆರ್ಜಿ ಗ್ರಾಮ ಬಾಳೂಗೋಡು, ಬಿಟ್ಟಂಗಾಲ ಸೇರಿದಂತೆ ನಗರದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ತೀರ್ಥ ಪ್ರಸಾದ ಸ್ವೀಕರಿಸಿ ಪುನಿತರಾದರು.

ಪೊಟೊ: ಶ್ರೀ ಸ್ವಾಮಿ ಭಜನಾ ಮಂದಿರದಲ್ಲಿ ನಡೆದ ಪಡಿಪೂಜೆಯ ಸಂಧರ್ಭ, ಸ್ವಾಮಿಯ ವಿರಾಟ್ ಸ್ಥಭ್ದ ಚಿತ್ರ, ಶೋಭಾಯಾತ್ರಯಲ್ಲಿ ಸಾಗಿದ ಮಹಿಳೆಯರು ಮತ್ತು ಮಕ್ಕಳು.

Share this article