21ರಂದು ಸಿದ್ದರ ಕ್ಷೇತ್ರದಲ್ಲಿ ಶ್ರೀ ನರಸಿಂಹ ಜಯಂತಿ

KannadaprabhaNewsNetwork |  
Published : May 14, 2024, 01:09 AM IST
ಸಿದ್ಧರ ನರಸಿಂಹ ದೇವಾಲಯ  | Kannada Prabha

ಸಾರಾಂಶ

ಕಾರವಾರ ತಾಲೂಕಿನ ಸಿದ್ದರದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ಶ್ರೀ ನರಸಿಂಹ ಜಯಂತಿ ಉತ್ಸವ ನಡೆಯಲಿದೆ. ಅಂದು ಬೆಳಗ್ಗೆಯಿಂದಲೇ ನರಸಿಂಹ ದೇವರ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಮ್ಮಿಕೊಂಡಿದೆ.

ಕಾರವಾರ: ಪ್ರಸಿದ್ಧ ದ್ವಿ ಹಸ್ತ ನರಸಿಂಹ ಕ್ಷೇತ್ರವಾಗಿರುವ ತಾಲೂಕಿನ ಸಿದ್ದರದ ಶ್ರೀ ನರಸಿಂಹ ದೇವಸ್ಥಾನದಲ್ಲಿ ಮೇ 21ರಂದು ಶ್ರೀ ನರಸಿಂಹ ಜಯಂತಿ ಉತ್ಸವ ಹಮ್ಮಿಕೊಳ್ಳಲಾಗಿದೆ.

17ನೇ ಶತಮಾನಗಳಿಂದ ಸಿದ್ದರ ಗ್ರಾಮದಲ್ಲಿ ನೆಲೆನಿಂತ ನರಸಿಂಹ ದೇವರನ್ನು ಭಕ್ತರ ಅಭಿಷ್ಟಗಳನ್ನು ಪೂರೈಸಿ, ಪೊರೆಯುವ ದೈವ ಎನ್ನಲಾಗುತ್ತದೆ. ಈ ಮೂಲಕವೇ ಶ್ರೀ ಕ್ಷೇತ್ರ ಸಿದ್ದರವು ಜಾಗ್ರತ ಕ್ಷೇತ್ರವೆಂದು ಗುರುತಿಸಿಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷ ಕ್ರೋಧಿ ನಾಮ ಸಂವತ್ಸರದ ಉತ್ತರಾಯಣ ವಸಂತ ಋತುವಿನ ವೈಶಾಖ ಶುಕ್ಲ ಪಕ್ಷದ ತೃಯೋದಶಿಯಂದು ಅಂದರೆ ಮೇ 21ರಂದು ನರಸಿಂಹ ಜಯಂತಿ ಇರುವ ಹಿನ್ನೆಲೆಯಲ್ಲಿ, ಸಿದ್ದರ ಗ್ರಾಮ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಉತ್ಸವವನ್ನು ಆಚರಿಸಲು ತಿರ್ಮಾನಿಸಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಂದು ಬೆಳಗ್ಗೆಯಿಂದಲೇ ನರಸಿಂಹ ದೇವರ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ದೇವಸ್ಥಾನದಲ್ಲಿ ಇರುವ ನರಸಿಂಹ ಸಹಿತ ಪ್ರಾಕಾರ ದೇವರುಗಳಿಗೆ ಅಭ್ಯಂಗಸ್ನಾನಾದಿಗಳು, ಪ್ರಾಕಾರ ಪೂಜೆಗಳು ನಡೆಯಲಿವೆ. 9 ಗಂಟೆಯಿಂದ ಗಣಪತಿ ಪೂಜೆ, ಪೂಣ್ಯಾಹ, ಕಲಶಸ್ಥಾಪನೆ, ಕಲಾವೃದ್ದಿ, ನರಸಿಂಹ ಮೂಲಮಂತ್ರ ಹವನ ಪೂರ್ಣಾಹುತಿ ಇದರ ಜತೆ ಜತೆಗೆ ನರಸಿಂಹ ದೇವರ ಮಹಾ ಅಭಿಷೇಕ, ಪ್ರಧಾನ ಕಲಾಶಾಭಿಷೇಕ ಪೂಜೆ, ಕ್ಷೇತ್ರಪಾಲ ಬಲಿ ಇತ್ಯಾದಿ ಧಾರ್ಮಿಕ ಅಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 1.30ರಿಂದ 3.30ರ ವರೆಗೆ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಶ್ರೀ ಕ್ಷೇತ್ರ ಸಿದ್ದರ ಗ್ರಾಮದಲ್ಲಿ ನಡೆಯಲಿರುವ ನರಸಿಂಹ ದೇವರ ಪಲ್ಲಕ್ಕಿ ಉತ್ಸವಕ್ಕೆ ಸಂಜೆ 4.30ಕ್ಕೆ ನರಸಿಂಹ ದೇವಸ್ಥಾನದಲ್ಲಿ ಚಾಲನೆ ಸಿಗಲಿದೆ. ಸಂಜೆ 5.30ಕ್ಕೆ ದೇವಸ್ಥಾನದಲ್ಲಿ ನಾಮಸಂಕೀರ್ತನೆ ನಡೆಯಲಿದ್ದು, ರಾತ್ರಿ 8.30ಕ್ಕೆ ಆಲಯಕ್ಕೆ ಉತ್ಸವದ ಆಗಮನದ ಆನಂತರ, ಅಷ್ಟಾವಧಾನ ಸೇವೆ, ಮಹಾಪೂಜೆ, ಸಾರ್ವಜನಿಕ ಪ್ರಾರ್ಥನೆ ಪ್ರಸಾದ (ಪಾನಕ, ಪಚಡಿ) ವಿತರಣೆಯಾಗಲಿದೆ. ಅಂದು ರಾತ್ರಿ 10.30ಕ್ಕೆ ಶ್ರೀ ನರಸಿಂಹ ವೇದಿಕೆಯಲ್ಲಿನ ನಾಡಿನ ಹೆಸರಾಂತ ಕೊಂಕಣಿ ರಂಗ ತಂಡ ʻಸಾಕಾರ ನಾಟಕ ಸಂಘʼದವರಿಂದ ʻಆಜಾ ಸಾವಧಾನ... ಬಾಬ್‌ ವಿಶ್ರಾಮ.. " ಎನ್ನುವ ಹಾಸ್ಯಮಯ ತತ್ವಾಧಾರಿತ ನಾಟಕದ ಪ್ರದರ್ಶನ ನಡೆಯಲಿದೆ.

ನರಸಿಂಹ ದೇವಸ್ಥಾನದಲ್ಲಿ ನಡೆಯುವ ನರಸಿಂಹ ಜಯಂತಿಯ ಸಂದರ್ಭದಲ್ಲಿ ನಡೆಯುವ ಹೋಮದ ಅಧ್ವರ್ಯಕ್ಕೆ (ಯಜಮಾನಿಕೆಗೆ) ಹಾಗೂ ಶ್ರೀ ದೇವರಿಗೆ ಅಭಿಷೇಕ ಮಾಡಿಸುವುದಕ್ಕೆ ಭಕ್ತರಿಗೆ, ಕುಳಾವಿಗಳಿಗೆ ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಶ್ರೀ ದತ್ತಾತ್ರೇಯ ಗಾಂವಕರ 9481914922, ಶ್ರೀ ರಾಜೇಂದ್ರ ರಾಣೆ 9448408643, ಶ್ರೀನಾಥ ಜೋಶಿ 9060188081 ಇವರನ್ನು ಸಂಪರ್ಕಿಸಬಹುದಾಗಿದೆ.

ಈ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ