- ಶ್ರೀ ರಾಮ ಮತ್ತು ಪರಿವಾರ ದೇವರುಗಳ ನೂತನ ದೇವಸ್ಥಾನದ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆ
ಶ್ರೀರಾಮ ಎಂದರೆ ಕೇವಲ ನಾಮ ಮಾತ್ರವಲ್ಲ. ಈ ದೇಶದ ಉಸಿರಾಗಿದ್ದು ಭಾರತ ರಾಮ ರಾಜ್ಯವಾಗಬೇಕಾಗಿದೆ ಎಂದು ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಶ್ರೀ ರಾಮ ಸೇವಾ ಸಂಘ ನೂತನವಾಗಿ ಕಟ್ಟಿಸಿರುವ ಶ್ರೀ ರಾಮ ಮತ್ತು ಪರಿವಾರ ದೇವರ ದೇವಸ್ಥಾನದ ಪ್ರತಿಷ್ಠಾಪನೆ, ಕಲಶ ಪೂಜೆ, ಕುಂಭಾಭಿಷೇಕ ಮತ್ತು ಧಾರ್ಮಿಕ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಕಳೆದ 35 ವರ್ಷದಿಂದ ರಾಮನ ದೇವಸ್ಥಾನ ಕಟ್ಟಿಸಬೇಕು ಎಂದು ಈ ಭಾಗದ ಜನರು ಶಬರಿಯಂತೆ ಕಾಯುತ್ತಿದ್ದರು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಆದ ನಂತರ ಇಲ್ಲಿ ಶ್ರೀ ರಾಮ ದೇವಸ್ಥಾನ ಪ್ರತಿಷ್ಠೆಯಾಗಿದೆ. ಶ್ರೀ ರಾಮ ಸೇವಾ ಸಂಘ ಹಾಗೂ ಸ್ಥಳೀಯರು ನಿರ್ಮಲ ಮನಸ್ಸಿನಿಂದ, ಭಕ್ತಿಯಿಂದ ಶ್ರಮ ಪಟ್ಟು ದಾನಿಗಳ ನೆರವು ಪಡೆದು ಶ್ರೀ ರಾಮ ದೇವಸ್ಥಾನ ಕಟ್ಟಿಸಿದ್ದಾರೆ. ಪ್ರತಿಯೊಬ್ಬ ಪುರುಷರು ಶ್ರೀ ರಾಮಚಂದ್ರ ಆಗಬೇಕು. ಪ್ರತಿಯೊಬ್ಬ ಮಹಿಳೆ ಸೀತಾ ದೇವಿ ಆಗಬೇಕು.ವಿಶ್ವದಲ್ಲಿ ಇಂದು ಅಶಾಂತಿ ಕಾಡುತ್ತಿದೆ. ಸನಾತನ ಧರ್ಮ ವಿಶ್ವಕ್ಕೆ ಶಾಂತಿ ಬಯಸುತ್ತದೆ ಎಂದರು.ರಾಮಾಯಣದಲ್ಲಿ ಶ್ರೀಲಂಕಾ ದಿಂದ ಸೀತೆ ಕರೆ ತರಲು ಶ್ರೀರಾಮನ ಸೇನೆ ಸೇತುವೆ ಕಟ್ಟಿತು. ಇಂದು ಭದ್ರಾ ಡ್ಯಾಂನಿಂದ ನರಸಿಂಹರಾಜಪುರದಿಂದ ದೂರವಾಗಿದ್ದ ಹೊನ್ನೇಕೊಡಿಗೆ ಜನರನ್ನು ಪಟ್ಟಣಕ್ಕೆ ಹತ್ತಿರ ಮಾಡಲು ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಶ್ರೀನಿವಾಸ್ ದೊಡ್ಡ ಸೇತುವೆ ನಿರ್ಮಿಸಿದ್ದಾರೆ. ಎಂ.ಶ್ರೀನಿವಾಸ್ ನರಸಿಂಹರಾಜಪುರದ ಅಭಿವೃದ್ದಿಯ ಹರಿಕಾರ ಎಂದು ಬಣ್ಣಿಸಿದರು.
ಅತಿಥಿಯಾಗಿದ್ದ ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ,ನರಸಿಂಹರಾಜಪುರ ಪಟ್ಟಣದ ಒಳಗೆ ಶ್ರೀ ರಾಮದೇವಸ್ಥಾನ ಇರಲಿಲ್ಲ. ಶ್ರೀ ರಾಮನ ಸಂಸ್ಕೃತಿ, ಆದರ್ಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಬಸ್ತಿಮಠದ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಶ್ರೀ ರಾಮದೇವಸ್ಥಾನದ ಕಲಶ ಪ್ರತಿಷ್ಠೆ, ಶಿಖರ ಪೂಜೆ, ಶ್ರೀ ರಾಮನ ಪ್ರತಿಷ್ಠೆ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ನೆರವೇರಿಸಿ ಪೂಜೆ ಸಲ್ಲಿಸಿದರು.
ಮುಂದಿನ ವರ್ಷದಿಂದ ಶ್ರೀ ರಾಮ ಸೇವಾ ಸಂಘ ಒಪ್ಪಿದರೆ ಪ್ರತಿ ವರ್ಷ ಈ ರಾಮ ದೇವಸ್ಥಾನದಲ್ಲಿ ರಾಮನವಮಿಯಂದು ಸಿಂಹನಗದ್ದೆ ಬಸ್ತಿಮಠದಿಂದ ಪೂಜೆ ನೆರವೇರಿಸಿಕೊಡುತ್ತೇವೆ ಎಂದು ಸಿಂಹನಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಘೋಷಿಸಿದರು.