ಸಿಂಧನೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿಂಧನೂರು ನಗರದ ಸೇರಿದಂತೆ ತಾಲೂಕಿನಾದ್ಯಂತ ರಾಮ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತಪಣೆ ಕಾರ್ಯಕ್ರಮ ನಡೆಸಿದರು.
ನಗರದ ಅಮರದೀಪ ಬಟ್ಟೆ ಅಂಗಡಿಯ ಪಕ್ಕದಲ್ಲಿ ಬಟ್ಟೆ ಮತ್ತು ರೆಡಿಮೆಂಟ್ ಅಂಗಡಿಗಳವತಿಯಿಂದ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಿತ್ತೂರುರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ಕಾರದ ಶ್ರೀರಾಮನ ಬ್ಯಾನರ್ ಹಾಕಿ ಪೂಜೆ ಸಲ್ಲಿಸಲಾಯಿತು. ಇಲ್ಲಿಯೂ ಸಾವಜನಿಕರಿಗೆ ಲಡ್ಡು, ಕಲ್ಲಂಗಡಿ ಮತ್ತಿತರ ಸಿಹಿ ಪದಾಥಗಳನ್ನು ವಿತರಿಸಿದರು. ಲಘುವಾಹನ ಚಾಲಕರ ಸಂಘದ ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಹಳೆಬಜಾರ್ನಲ್ಲಿರುವ ಛಾವಡಿ ಆಂಜನೇಯ ದೇವಸ್ಥಾನದ ಮುಂದೆಯೂ ಶ್ರೀರಾಮ ಎಲ್ಇಡಿ ಬ್ಯಾನರ್ ಹಾಕಿ ಹೂವುಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮ ವೃತ್ತದ ನಾಮಫಲಕವನ್ನು ಇದೇ ಸಂದರ್ಭದಲ್ಲಿ ಅನಾವರಣ ಮಾಡಲಾಯಿತು.
ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಓಎಫ್ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಬಿಜೆಪಿ ಮುಖಂಡ ಕೆ.ಕರಿಯಪ್ಪ ಸೇರಿದಂತೆ ಅನೇಕ ಮುಖಂಡರು ಎಲ್ಲ ಕಡೆ ತೆರಳಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.