ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಎಳ್ಳಮಾವಾಸ್ಯೆ ಅಂಗವಾಗಿ ಮೂರನೇ ದಿನದಂದು ನಡೆಯುವ ಶ್ರೀ ರಾಮೇಶ್ವರ ತೆಪ್ಪೋತ್ಸವ ಬಾನಂಗಣದಲ್ಲಿ ಮೂಡಿದ ಸಿಡಿಮದ್ದುಗಳ ಚಿತ್ತಾರದೊಂದಿಗೆ ಶನಿವಾರ ಪ್ರಕೃತಿ ಸೌಂದರ್ಯದ ನಡುವಿನ ತುಂಗಾನದಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಸಮೂಹದ ನಡುವೆ ಅದ್ಧೂರಿಯಾಗಿ ಜರುಗಿತು.ಕಳೆದ ಐದು ದಶಕಗಳಿಂದ ನಡೆಯತ್ತಿರುವ ಅದ್ದೂರಿಯ ತೆಪ್ಪೋತ್ಸವ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿದ್ದು ವಾರದ ಕೊನೆಯ ದಿನವಾದ ಕಾರಣ ನಿರೀಕ್ಷೆಗೂ ಮೀರಿ ರಾಜ್ಯದಾದ್ಯಂತ ಹರಿದು ಬಂದಿದ್ದ ಜನಜಾತ್ರೆ ಸೇರಿತ್ತು. ಸುಂದರ ಪರಿಸರದ ನಡುವೆ ಹರಿಯುತ್ತಿರುವ ತುಂಗಾನದಿಯ ಇಕ್ಕೆಲೆಗಳಿಗೆ ಮತ್ತು ಇಲ್ಲಿನ ತೂಗು ಸೇತುವೆ ಹಾಗೂ ರಾಮೇಶ್ವರ ದೇವಸ್ಥಾನದ ಸುತ್ತಲಿನ ಆವರಣಕ್ಕೆ ಅಳವಡಿಸಿದ್ದ ದೀಪಾಲಂಕಾರ ಆಕರ್ಷಣೀಯವಾಗಿದ್ದು. ನದಿಯ ಬಲದಂಡೆಯಲ್ಲಿ ನಿರ್ಮಿಸಿದ ರಾಮಮಂದಿರದ ಮಾಡೆಲ್ ಮನಸೆಳೆಯುವಂತಿತ್ತು.ರಾತ್ರಿ ಎಂಟು ಗಂಟೆಗೆ ರಾಮೇಶ್ವರ ದೇವರ ಉತ್ಸವಮೂರ್ತಿ ನದಿದಡಕ್ಕೆ ಆಗಮಿಸುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನದಿಯ ಇಕ್ಕೆಲೆಗಳು ರಥಬೀದಿ, ಕೆಸಿ ರಸ್ತೆ, ಕುವೆಂಪು ಮಾರ್ಗಗಳು ಜನಸಂದಣಿಯಿಂದ ತುಂಬಿತ್ತು. ಎಲ್ಲಾ ಮಾರ್ಗಗಳಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿತ್ತು.
ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ತಹಸಿಲ್ದಾರ್ ಜಕ್ಕನಗೌಡರ್, ಡಿವೈಎಸ್‍ಪಿ ಗಜಾನನ ಸುತಾರ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಸಿರಿಬೈಲ್ ಧರ್ಮೇಶ್, ಪಪಂ ಮುಖ್ಯಾಧಿಕಾರಿ ಕುರಿಯಾ ಕೋಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಡಿವೈಎಸ್‍ಪಿ ಗಜಾನನ ಸುತಾರ್ ಮಾರ್ಗದರ್ಶನದಲ್ಲಿ ಪೋಲಿಸ್ ತಂಡದ ಕಣ್ಗಾವಲಿನೊಂದಿಗೆ ಸಿಸಿ ಟಿವಿ ಮತ್ತು ಡ್ರೋಣ್ ಕ್ಯಾಮೆರಾ ಬಳಸಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.- - - ಬಾಕ್ಸ್ರಾಮಾಯಣದ ಮಹತ್ವ ಸಾರುವ ವಸ್ತುಗಳ ಮಳಿಗೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಲೋಕಾರ್ಪಣೆ ಸಂಭ್ರಮ ದೇಶದ ಎಲ್ಲೆಡೆ ಸಂಚಲನ ಮೂಡಿಸುತ್ತಿರುವ ಈ ಸಂದರ್ಭದಲ್ಲಿ ರಾಮಮಂದಿರದ ಮಾಡೆಲ್ ಸೇರಿದಂತೆ ರಾಮಾಯಣದ ಮಹತ್ವವನ್ನು ಸಾರುವ ವಸ್ತುಗಳ ಮಳಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಎಳ್ಳಮಾವಾಸ್ಯೆ ಜಾತ್ರೆ ನಡೆಯುವ ರಥಬೀದಿಯಲ್ಲಿ ತೆರೆದಿದ್ದು ಎಲ್ಲರ ಗಮ£ವನ್ನು ಸೆಳೆಯುತ್ತಿದೆ.
ಈ ಮಳಿಗೆಯಲ್ಲಿ ರಾಮಮಂದಿರದ ಮಾಡೆಲ್, ರಾಮನ ಚಿತ್ರವಿರುವ ಟೀ ಶರ್ಟ್, ರಾಮನ ಫೋಟೋ, ವಾಲ್ ಪ್ಲೇಟ್, ಕೇಸರಿ ಶಾಲು ಮತ್ತು ಬಾವುಟಗಳು ಹೀಗೆ ಈ ಮಳಿಗೆಯಲ್ಲಿ ಇರುವ ಬಹುತೇಕ ಎಲ್ಲಾ ವಸ್ತುಗಳೂ ಶ್ರೀರಾಮ, ರಾಮಮಂದಿರ ಮತ್ತು ಇತರೆ ವಸ್ತುಗಳು ಕೂಡಾ ಹಿಂದೂ ಧಾರ್ಮಿಕ ಹಿನ್ನೆಲೆಗೆ ಸಂಭಂದಪಟ್ಟಿವೆ.ಪಟ್ಟಣದಲ್ಲಿ ಫ್ಯಾನ್ಸಿ ಸ್ಟೋರ್ ನಡೆಸುತ್ತಿರುವ ಶಿವಾನಂದ್ ಮಾಲೀಕತ್ವದ ಈ ಮಳಿಗೆಯಲ್ಲಿ ವ್ಯಾಪಾರವೂ ಜೋರಾಗಿಯೇ ನಡೆದಿದೆ. ರಾಮ ಭಕ್ತರನ್ನು ಆಕರ್ಷಿಸುತ್ತಿರುವ ಈ ಮಳಿಗೆಯಲ್ಲಿ ದೊರೆಯುವ ವಸ್ತುಗಳು ರಿಯಾಯ್ತಿ ದರದಲ್ಲಿಯೇ ದೊರೆಯುತ್ತಿದೆ ಎಂಬ ಭಾವನೆ ಗ್ರಾಹಕರಲ್ಲಿದೆ.
- - - -13ಟಿಟಿಎಚ್01: ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಹಾಕಿರುವ ರಾಮಾಯಣದ ಮಹತ್ವವನ್ನು ಸಾರುವ ವಸ್ತುಗಳ ಮಳಿಗೆ.