ಕನ್ನಡಪ್ರಭ ವಾರ್ತೆ ಬೀದರ್
ಭಾರತದ ಹಿತ ಸಂಘಟನೆಯಲ್ಲೇ ಅಡಗಿದೆ. ನಾವು ಒಗ್ಗಟ್ಟು ಪ್ರದರ್ಶಿಸಿದಾಗೆಲ್ಲ ಶಕ್ತಿಶಾಲಿಯಾಗಿದ್ದೇವೆ. ವಿಘಟಿತರಾದಾಗ ಅದರ ಬೆಲೆಯನ್ನೂ ತೆತ್ತಿದ್ದೇವೆ. ಇತಿಹಾಸದ ಕಠೋರ ಸತ್ಯಗಳಿಂದ ಪಾಠ ಕಲಿಯಬೇಕು. ಸಮಾಜದಲ್ಲಿ ಸಾಮರಸ್ಯ ನಿರ್ಮಾಣದ ತೀರ ಅಗತ್ಯವಿದೆ. ಇದರಲ್ಲಿ ಪೂಜ್ಯರ, ಸಂತರ, ಸ್ವಾಮೀಜಿಗಳ (ಧರ್ಮ ಗುರುಗಳ) ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಹೇಳಿದರು.ಜಿಲ್ಲಾ ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದ ಗುರುನಗರ ಬಡಾವಣೆ ಡಾ.ಬಸವರಾಜ ಪಾಟೀಲ್ ಅಷ್ಟೂರ್ ನಿವಾಸದಲ್ಲಿ ಜಿಲ್ಲೆಯ ಪೂಜ್ಯರು, ಸಂತರೊಂದಿಗೆ ಸಂವಾದ ನಡೆಯಿತು. ಶಂಕರಾನಂದ ಉಪಸ್ಥಿತಿಯಲ್ಲಿ ನಡೆದ ಸಂವಾದ ಗೋಷ್ಠಿಯಲ್ಲಿ ವೀರಶೈವ-ಲಿಂಗಾಯತ, ಬಂಜಾರಾ, ಬೌದ್ಧ, ಸಿಖ್, ವಿಶ್ವಕರ್ಮ ಸೇರಿದಂತೆ ವಿವಿಧ ಸಂಪ್ರದಾಯಗಳ 35ಕ್ಕೂ ಹೆಚ್ಚು ಪೂಜ್ಯರು ಪಾಲ್ಗೊಂಡಿದ್ದರು. ಸಮಾಜದಲ್ಲಿ ಸಮಾನತೆ ತರುವುದು, ಅಸ್ಪ್ರಶ್ಯತೆ, ಮೇಲು-ಕೀಳು ನಿವಾರಣೆ, ಎಲ್ಲ ಮಹಾಪುರುಷರ ಚಿಂತನೆಗಳಡಿ ಜಾತಿಭೇದ ಮರೆತು ಸಶಕ್ತ ಸಮಾಜದ ನಿರ್ಮಾಣ ಕುರಿತಾಗಿ ಮುಕ್ತವಾಗಿ ಚರ್ಚೆ ನಡೆದವು. ಅನೇಕ ಶ್ರೀಗಳು ಇದಕ್ಕೆ ಪೂರಕವಾಗಿ ಮಹತ್ವದ ಸಲಹೆ, ಸೂಚನೆ ತಿಳಿಸಿದರು.
ಜಾತೀಯತೆ, ಮೇಲು-ಕೀಳು, ಅಸ್ಪೃಶ್ಯತೆ, ಅಸಮಾನತೆಗಳು ಸ್ವಸ್ಥ ಸಮಾಜಕ್ಕೆ ಕಂಟಕವಾಗಿವೆ. ನಮ್ಮ ಮಧ್ಯೆ ಇರುವ ಸಮಾಜಘಾತುಕ ಶಕ್ತಿಗಳು ಇದರ ದುರ್ಲಾಭ ಪಡೆದುಕೊಂಡು ಸಮಾಜದಲ್ಲಿ ಜಾತಿ ವಿಷ ಬೀಜ ಬಿತ್ತಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಭಾರತೀಯರ ಸಾಮರಸ್ಯದ ಬದುಕಿಗೆ ಕೊಳ್ಳಿ ಇಡುವ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರದಿಂದ ಇರಬೇಕಾಗಿದೆ. ಸಮಾಜದಲ್ಲಿ ಕೆಳಮಟ್ಟದ ಜೊತೆಗೆ ಸರ್ವ ಸಮುದಾಯದಲ್ಲಿ ಸಾಮರಸ್ಯ ಗಟ್ಟಿಗೊಳಿಸಿ, ಎಲ್ಲರಿಗೂ ಒಟ್ಟುಗೂಡಿಸುವಲ್ಲಿ ಶ್ರೀಗಳ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ಶಂಕರಾನಂದ ಪ್ರತಿಪಾದಿಸಿದರು.ಮಹಾಪುರುಷರು ಒಂದೇ ಜಾತಿಗೆ ಸೀಮಿತರಲ್ಲ:ಮೌಲಿಕ ಚಿಂತನೆ, ತತ್ವಾದರ್ಶ ಮುಖಾಂತರ ಸಮಾಜಕ್ಕೆ ಬೆಳಕಾಗಿ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ಅನೇಕ ಮಹಾಪುರುಷರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಅವರೆಲ್ಲರೂ ಸಮಾಜ ಸುಧಾರಕರು. ಅವರ ತತ್ವ, ವಿಚಾರ ಅರಿತು ನಾವೆಲ್ಲರೂ ಸಾಗಬೇಕಾಗಿದೆ. ಮಹಾಪುರುಷರಿಗೆ ಜಾತಿಗೆ ಕಟ್ಟಿಹಾಕುವುದು ಸರಿಯಲ್ಲ ಎಂದು ಶಂಕರಾನಂದ ಹೇಳಿದರು.
ಮಹಾತ್ಮ ಬುದ್ಧ, ಬಸವಣ್ಣ, ಕನಕದಾಸರು, ಛತ್ರಪತಿ ಶಿವಾಜಿ, ಅಹಿಲ್ಯಾಬಾಯಿ ಹೋಳ್ಕರ್, ಡಾ.ಅಂಬೇಡ್ಕರ್ ಮುಂತಾದವರ ಜಯಂತ್ಯುತ್ಸವ ಎಲ್ಲರೂ ಸೇರಿ ಸಾಮೂಹಿಕವಾಗಿ ಆಚರಿಸಬೇಕು. ಪರಿಶಿಷ್ಟರ ಓಣಿಗಳಲ್ಲಿ ಪಾದಯಾತ್ರೆ, ಸಹಪಂಕ್ತಿ ಭೋಜನ, ಮಠ-ಮಂದಿರಗಳಲ್ಲಿ ವಿಶೇಷ ಕಾರ್ಯಕ್ರಮ ಇನ್ನಿತರೆ ಚಟುವಟಿಕೆಗಳ ಮೂಲಕ ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.ಸಾಮಾಜಿಕ ಸಾಮರಸ್ಯ ವಿಭಾಗ ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ವರ ಶಿವಾಚಾರ್ಯ, ಡಾ.ಶಿವಾನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ, ಜಯಶಾಂತಲಿಂಗ ಶಿವಾಚಾರ್ಯರು, ಹಾವಗಿಲಿಂಗ ಶಿವಾಚಾರ್ಯರು, ಭಂತೆ ಜ್ಞಾನಸಾಗರ, ಜ್ಞಾನಿ ದರ್ಬಾರಾಸಿಂಗ್, ಗೋವಿಂದ ಮಹಾರಾಜ ಸೇರಿದಂತೆ 35ಕ್ಕೂ ಹೆಚ್ಚು ಶ್ರೀಗಳು ಇದ್ದರು. ಈ ಸಂದರ್ಭದಲ್ಲಿ ಕೆಲ ಪೂಜ್ಯರು ಮಾತನಾಡಿ ಸಲಹೆ ನೀಡಿದರು.
ಸಾಮರಸ್ಯ ವೇದಿಕೆ ಜಿಲ್ಲಾ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್, ಜಿಲ್ಲಾ ಸಂಯೋಜಕ ಬಾಬುರಾವ ಮುಸ್ತಾಪುರೆ, ಉತ್ತರ ಪ್ರಾಂತ ಮಾಧ್ಯಮ ಪ್ರಮುಖ ಸದಾನಂದ ಜೋಶಿ, ಪ್ರಮುಖರಾದ ಡಾ.ಬಸವರಾಜ ಪಾಟೀಲ್ ಅಷ್ಟೂರ್, ಸು.ಕೃಷ್ಣಮೂರ್ತಿ ಹುಬ್ಬಳ್ಳಿ, ಹಣಮಂತರಾವ ಪಾಟೀಲ್, ನಾಗೇಶರೆಡ್ಡಿ ಇತರರಿದ್ದರು. ಎಲ್ಲ ಪೂಜ್ಯರಿಗೆ ಡಾ.ಬಸವರಾಜ ಪಾಟೀಲ್ ಅಷ್ಟೂರ್ ಅವರು ಗೌರವಿಸಿದರು.