ವಿಜೃಂಭಣೆಯಿಂದ ನಡೆದ ಶ್ರೀಸೀತಾಪತಿ ಜಾತ್ರಾ ಮಹೋತ್ಸವ; ಧೂಪಸೇವೆ

KannadaprabhaNewsNetwork | Published : Feb 27, 2025 12:30 AM

ಸಾರಾಂಶ

ಶ್ರೀಮಂಚಮ್ಮದೇವಿ ದೇವಸ್ಥಾನದಿಂದ ಶ್ರೀಸೀತಾಪತಿ ಸ್ವಾಮಿಯ ಬಿರುದು ಮತ್ತು ಪೂಜಾ ಸಾಮಗ್ರಿಗಳ ಹೊರೆಹೊತ್ತ ದೇವರ ಒಕ್ಕಲುಗಳು ಪಾದಯಾತ್ರೆಯಲ್ಲಿ ಗ್ರಾಮದ ಹೊರವಲಯದಲ್ಲಿರುವ ಸೀತಾಪತಿ ದೇವರ ಸನ್ನಿಧಾನಕ್ಕೆ ಬಂದ ನಂತರ ಅರ್ಚಕರು ಶ್ರೀರಾಮದೇವರಿಗೆ ವಿಶೇಷ ಪೂಜಾ ವಿಧಿವಿಧಾನ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಹರಳಕೆರೆ ಗ್ರಾಮದಲ್ಲಿ ಶ್ರೀಸೀತಾಪತಿ ಜಾತ್ರಾ ಮಹೋತ್ಸವ ಮತ್ತು ಧೂಪಸೇವೆ ಕಾರ್ಯವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಬಹಳ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಶ್ರೀಮಂಚಮ್ಮದೇವಿ ದೇವಸ್ಥಾನದಿಂದ ಶ್ರೀಸೀತಾಪತಿ ಸ್ವಾಮಿಯ ಬಿರುದು ಮತ್ತು ಪೂಜಾ ಸಾಮಗ್ರಿಗಳ ಹೊರೆಹೊತ್ತ ದೇವರ ಒಕ್ಕಲುಗಳು ಪಾದಯಾತ್ರೆಯಲ್ಲಿ ಗ್ರಾಮದ ಹೊರವಲಯದಲ್ಲಿರುವ ಸೀತಾಪತಿ ದೇವರ ಸನ್ನಿಧಾನಕ್ಕೆ ಬಂದ ನಂತರ ಅರ್ಚಕರು ಶ್ರೀರಾಮದೇವರಿಗೆ ವಿಶೇಷ ಪೂಜಾ ವಿಧಿವಿಧಾನ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು.

ನಂತರ ಸೀತಾಮಾತೆ ಶ್ರೀರಾಮ ಲಕ್ಷ್ಮಣ ಮತ್ತು ಹನುಮಂತದೇವರಿಗೆ ಮಹಾ ಮಂಗಳಾರತಿ, ನಾಮಸೇವೆ ಧೂಪಸೇವೆ ನಡೆಯಿತು. ಜಿಲ್ಲೆ ಹಾಗೂ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಹರಕೆ ರೂಪದಲ್ಲಿ ದೇವರಿಗೆ ಕಿಲೋ ಗಟ್ಟಲೆ ಸಾಮ್ರಾಣಿ ಮತ್ತು ಕರ್ಪೂರ ಸಮರ್ಪಿಸಿದರು.

ಸೀತಾಪತಿ ದೇವರಿಗೆ ಹೂ ಹಣ್ಣು, ತೆಂಗಿನಕಾಯಿ, ಊದುಬತ್ತಿಯ ಪೂಜೆ ಪುರಸ್ಕಾರಗಳಿಲ್ಲ. ಬದಲಿಗೆ ಸಾಮ್ರಾಣಿ ಹಾಗೂ ಕರ್ಪೂರವನ್ನೇ ಅಧಿಕ ಪ್ರಮಾಣದಲ್ಲಿ ಹರಕೆ ರೂಪದಲ್ಲಿ ಅರ್ಪಿಸಿದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಮಧ್ಯಾಹ್ನ 1.30 ಗಂಟೆಗೆ ಧೂಪದ ರಾಶಿಗೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ನಂತರ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಸಣ್ಣಕ್ಕಿರಾಯಸ್ವಾಮಿ ದೇಗುಲದ ಬಾಗಿಲು ತೆಗೆಸುವಲ್ಲಿ ಪೊಲೀಸರು ಯಶಸ್ವಿ

ಭಾರತೀನಗರ:

ದೇವಾಲಯ ಅಭಿವೃದ್ಧಿ ಟ್ರಸ್ಟ್ ಮತ್ತು ದೊಡ್ಡರಸಿನಕೆರೆ ಗ್ರಾಮಸ್ಥರಲ್ಲಿ ಉಂಟಾದ ವಿವಾದವನ್ನು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ನೇತೃತ್ವದಲ್ಲಿ ಸಭೆ ನಡೆಸಿ ಸತತ 3 ಗಂಟೆಗಳ ಕಾಲ ಸಂಧಾನ ಮಾಡಿ ದೊಡ್ಡರಸಿನಕೆರೆ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾಲಯ ಬಾಗಿಲು ತೆಗೆಸುವವಲ್ಲಿ ಯಶಸ್ವಿಯಾದರು.

ಶ್ರೀಸಣ್ಣಕ್ಕಿರಾಯಸ್ವಾಮಿ ಇತಿಹಾಸ ಪ್ರಸಿದ್ಧ ದೇವಾಲಯ. ದೇವರ ಕೂಲದವರು ವಿವಿಧ ಗ್ರಾಮಗಳಲ್ಲಿ ನೆಲಸಿದ್ದು ಶಿವರಾತ್ರಿ ಹಬ್ಬದಂದು ದೇವರಿಗೆ ಪೂಜೆ ಸಲ್ಲಿಸಿಲ್ಲ ಎಂಬ ಆತಂಕದಲ್ಲಿದ್ದರು. ಮಧ್ಯಾಹ್ನ ದೇಗುಲದ ಬಾಗಿಲು ತೆರದ ನಂತರ ದೇವರಿಗೆ ವಿವಿಧ ಪೂಜಾ ಕೈಕಂರ್ಯಗಳು ಜರುಗಿದವು.

ಗ್ರಾಮದ ದೇವರ ಬಸಪ್ಪನ ಮನೆಗೂ ಸಹ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್‌ಗೌಡ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ ಹಾಕಿದ್ದ ಬೀಗವನ್ನು ತೆಗೆಸಲಾಯಿತು.

Share this article