ಕನ್ನಡಪ್ರಭ ವಾರ್ತೆ ಹಾಸನ
ಬಂದ ಭಕ್ತರಿಗೆಲ್ಲಾ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಯಿತು. ಇದೇ ವೇಳೆ ಸಮಿತಿ ಅಧ್ಯಕ್ಷ ಅಶೋಕ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಒಂದು ದಿನಗಳ ಹಿಂಧೆ ಬುಧವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಮಾರಿಕಾಂಬೆಯ ಮೂಲಸ್ಥಾನದಲ್ಲಿ ಅಭಿಷೇಕ ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿದೆ. ಈ ಅನ್ನಸಂತರ್ಪಣೆಯನ್ನು ದಿವಂಗತ ಎಚ್.ಡಿ. ದೇವರಾಜು ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಸಹೋದರರು (ರಂಗನಾಥ ಪ್ರಾವಿಜನ್ ಸ್ಟೋರ್, ಹಾಸನ) ಆಯೋಜಿಸಿದ್ದಾರೆ. ಸಂಜೆ ೬ ಗಂಟೆಗೆ ದೇವಿಗೆರೆಯಿಂದ ಗಂಗಾಕಳಸದೊಂದಿಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಾಲಯಕ್ಕೆ ಭಕ್ತಿಪೂರ್ಣ ಆಗಮನ ನಡೆದಿದೆ. ಜನವರಿ ೧೫ ಗುರುವಾರ ಬೆಳಿಗ್ಗೆ ೫ರಿಂದ ೭.೩೦ರ ವರೆಗೆ ದುರ್ಗಾ ಹೋಮ ಜರುಗಿತು. ಬೆಳಿಗ್ಗೆ ೯ ಗಂಟೆಗೆ ಗಂಗಾಮತಸ್ಥರ ಬೀದಿಯಿಂದ ಗಂಗಾಮತಸ್ಥರು, ಆಡುವಳ್ಳಿ ಗ್ರಾಮಸ್ಥರು ಹಾಗೂ ಸಕಲ ಭಕ್ತಾಧಿಗಳಿಂದ ತಂಬಿಟ್ಟಿನ ಆರತಿ ಮತ್ತು ನಿಂಬೇಹಣ್ಣಿನ ದೀಪಗಳ ಮೂಲಕ ಶ್ರೀ ಅಮ್ಮನವರ ಉತ್ಸವ ನಡೆಯಿತು. ಮಧ್ಯಾಹ್ನ ೧ ಗಂಟೆಯಿಂದ ಅನ್ನಸಂತರ್ಪಣೆ ಯಶಸ್ವಿಯಾಗಿ ನಡೆದಿದೆ ಎಂದರು.
ಇಂದು ರಥೋತ್ಸವ:ಜನವರಿ ೧೬ ಶುಕ್ರವಾರ ರಾತ್ರಿ ೮ ಗಂಟೆಗೆ ದಿವ್ಯ ರಥೋತ್ಸವದೊಂದಿಗೆ ಶ್ರೀ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಲಿವೆ. ಈ ಉತ್ಸವವನ್ನು ಹಾಸನ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಉದ್ಘಾಟಿಸಲಿದ್ದಾರೆ. ಜನವರಿ ೧೭ ಶನಿವಾರ ಸಂಜೆ ೭ ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜನವರಿ ೨೦ ಮಂಗಳವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಭಗವದ್ಭಕ್ತರ ಸಾನ್ನಿಧ್ಯದಲ್ಲಿ ನೆರವೇರಲಿದೆ.ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಡುಸಲಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ಹಾಗೂ ಉಡುಸಲಮ್ಮ ಮತ್ತು ಕರಿಬೀರೇಶ್ವರ ದೇವರ ಭಕ್ತ ಮಂಡಳಿ, ಹಾಸನದ ಭಕ್ತಾದಿಗಳ ಪರವಾಗಿ ವಿನಂತಿಸುವುದಾಗಿ ಹೇಳಿದರು.