- 24ರಂದು ಹೂವಿನ ಅಡ್ಡಪಲ್ಲಕ್ಕಿ, ಉತ್ಸವ- ಗುಗ್ಗುಳ ಸೇವೆ: ಡಾ. ಶ್ರೀ ಅಭಿನವ ಸಿದ್ಧಲಿಂಗ ಶ್ರೀ ಮಾಹಿತಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದಲ್ಲಿ ಶ್ರೀ ಉಮಾ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಡಿ.23ರಿಂದ 25ರವರೆಗೆ ನಡೆಯಲಿದೆ ಎಂದು ಶ್ರೀಮಠದ ಡಾ. ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.ಡಿ.25ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಕ್ಷೇತ್ರನಾಥ ಉಮಾಮಹೇಶ್ವರ ಸ್ವಾಮಿ, ಶ್ರೀ ಜಗದ್ಗುರು ರೇಣುಕಾಚಾರ್ಯರು, ಶ್ರೀ ಕುಡ್ಲೂರು ವೀರಭದ್ರಸ್ವಾಮಿ, ಆದಿಶಕ್ತಿ ಶ್ರೀ ಚೌಡೇಶ್ವರಿ ದೇವಿಗೆ ಮಹಾಭಿಷೇಕ, ಶಿವಸಹಸ್ರನಾಮ ಸಹಿತ ಮಹಾಮಂಗಳಾರತಿ ನಡೆಯಲಿದೆ. 10 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸಂಜೆ 5ಗಂಟೆಗೆ ಶಂಕರಿಪುರದ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಹೆಗ್ಗುಂದಲೆ ವೀರಭದ್ರಸ್ವಾಮಿ ಆಗಮನ ವಾಗಲಿದೆ. 5.30ರಿಂದ ಶ್ರೀ ಉಮಾಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಮಾರಂಭ ನಡೆಯಲಿದೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ಧಾರವಾಡದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ.ದಿವ್ಯ ಸಮ್ಮುಖವನ್ನು ಹುಣಸೇಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಮಗಳೂರು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ತುಮಕೂರು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಕೋಲಾರದ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತೇಜೇಶ್ವರ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಬಸವರಾಜ ವಿ. ಶಿವಗಂಗಾ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಆರ್.ಟಿ. ಪ್ರಶಾಂತ್, ಮಾಡಾಳು ಮಲ್ಲಿಕಾರ್ಜುನ್, ವಡ್ನಾಳ್ ಅಶೋಕ್, ಮಹಾಲಿಂಗ ಶಾಸ್ತ್ರಿ, ಟಿ.ವಿ. ಜಗದೀಶ್ ಭಾಗವಹಿಸುವರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಶಿವಮೊಗ್ಗದ ಶಿವಶಕ್ತಿ ಸಮಾಜದ ಅಧ್ಯಕ್ಷೆ ಅನ್ನಪೂರ್ಣೇಶ್ವರಿ ಅವರಿಗೆ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಡಿ.24ರಂದು ಬೆಳಗ್ಗೆ 6 ಗಂಟೆಯಿಂದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಗುಗ್ಗುಳ ಸೇವೆಯೊಂದಿಗೆ ತೋಟಕ್ಕೆ ದಯಮಾಡಿಸುವುದು. ತೋಟದಲ್ಲಿ ಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ. ಡಿ.25ರಂದು ಬೆಳಗ್ಗೆ ವಿಶೇಷ ಪೂಜೆ ನಡೆದು, ಸಂಜೆ 6.30 ಗಂಟೆಗೆ ಶ್ರೀ ಸ್ವಾಮಿಯ ಪುರ ಪ್ರವೇಶ ನಡೆಯುವುದು ಎಂದು ತಿಳಿಸಿದ್ದಾರೆ.- - - -17ಕೆಸಿಎನ್ಜಿ2: ಶ್ರೀ ಅಭಿನವಸಿದ್ದಲಿಂಗ ಸ್ವಾಮೀಜಿ