ಶ್ರೀಮತಿ ಶೆಟ್ಟಿ ಕೊಂದು 29 ತುಂಡು ಮಾಡಿ ಎಸೆದ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Sep 25, 2024, 01:05 AM IST
೩೨ | Kannada Prabha

ಸಾರಾಂಶ

ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಎಂಬವರ ಕೊಲೆ ಮಾಡಿ 29 ತುಂಡುಗಳನ್ನಾಗಿ ಕತ್ತರಿಸಿ ಎಸೆದ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, 3ನೇ ಅಪರಾಧಿಗೆ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಎಂಬವರ ಕೊಲೆ ಮಾಡಿ 29 ತುಂಡುಗಳನ್ನಾಗಿ ಕತ್ತರಿಸಿ ಎಸೆದ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, 3ನೇ ಅಪರಾಧಿಗೆ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದೆ.

ನಗರದ ಸೂಟರ್‌ಪೇಟೆಯ ಜೋನಸ್‌ ಸ್ಯಾಮ್ಸನ್‌ (40), ವಿಕ್ಟೋರಿಯಾ ಮಥಾಯಿಸ್‌ (47) ಜೀವಾವಧಿ ಶಿಕ್ಷೆಗೊಳಗಾದವರು. ಕೃತ್ಯಕ್ಕೆ ಸಹಕಾರ ನೀಡಿದ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಎಂಬಾತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಶ್ರೀಮತಿ ಶೆಟ್ಟಿ ನಡೆಸುತ್ತಿದ್ದ ಚಿಟ್‌ಫಂಡ್‌ ವ್ಯವಹಾರದಲ್ಲಿ 2 ಸದಸ್ಯತ್ವ ಹೊಂದಿದ್ದ ಜೋನಸ್‌ ಸ್ಯಾಮ್ಸನ್‌ ಮಾಸಿಕ ಕಂತು ಕಟ್ಟಲು ವಿಫಲನಾಗಿದ್ದ. ಇದೇ ವಿಚಾರದಲ್ಲಿ 2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಶ್ರೀಮತಿ ಶೆಟ್ಟಿ ಅವರು ಆರೋಪಿ ಜೋನಸ್‌ ಸ್ಯಾಮ್ಸನ್‌ ಮನೆಗೆ ತೆರಳಿದ್ದರು. ಅಲ್ಲಿ ಸ್ಯಾಮ್ಸನ್‌ ಏಕಾಏಕಿ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದು ಕೊಲೆಗೈದಿದ್ದ. ಬಳಿಕ ಜೋನಸ್‌ ಮತ್ತು ವಿಕ್ಟೋರಿಯಾ ಸೇರಿ ಮೃತದೇಹದ ಮೇಲಿದ್ದ ಚಿನ್ನಾಭರಣ ಸುಲಿಗೆ ಮಾಡಿ ದೇಹವನ್ನು 29 ತುಂಡು ಮಾಡಿದ್ದರು. ಬಳಿಕ ಪ್ಲಾಸ್ಟಿಕ್‌ ಗೋಣಿಚೀಲದಲ್ಲಿ ತುಂಬಿಸಿ ನಗರದ ವಿವಿಧ ಕಡೆ ಎಸೆದಿದ್ದರು.

ಶ್ರೀಮತಿ ಶೆಟ್ಟಿಯ ಚಿನ್ನಾಭರಣಗಳನ್ನು 3ನೇ ಆರೋಪಿ ರಾಜುಗೆ ಕೊಟ್ಟಿದ್ದ ಸ್ಯಾಮ್ಸನ್‌ ವಿಷಯವನ್ನೂ ತಿಳಿಸಿದ್ದ. ಆದರೂ ರಾಜು, ಆರೋಪಿಗಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಲ್ಲದೆ, ಸ್ಯಾಮ್ಸನ್‌ನ ಸ್ಕೂಟರ್‌ನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ಅಲ್ಲದೆ ಆರೋಪಿಗಳು ತಲೆಮರೆಸಿಕೊಳ್ಳಲು ನೆರವಾಗಿದ್ದ.ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು.ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯವು 1ನೇ ಮತ್ತು 2 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25ಸಾವಿರ ರು. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ, ಐಪಿಸಿ 201ರಡಿ (ಸಾಕ್ಷ್ಯ ನಾಶ) 7 ವರ್ಷಗಳ ಸಾದಾ ಸಜೆ ಮತ್ತು ತಲಾ 5 ಸಾವಿರ ರು. ದಂಡ, ದಂಡ ತೆರಲು ವಿಫಲವಾದರೆ 3 ತಿಂಗಳ ಸಾದಾ ಸಜೆ, ಐಪಿಸಿ 392 ಜತೆಗೆ 34ರಡಿ (ಸುಲಿಗೆ)ಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ 5 ಸಾವಿರ ರು. ದಂಡ, ದಂಡ ಪಾವತಿಸಲು ವಿಫಲವಾದರೆ 6 ತಿಂಗಳ ಸಾದಾ ಸಜೆ ವಿಧಿಸಿದೆ. 3ನೇ ಆರೋಪಿಗೆ ಐಪಿಸಿ 414ರಡಿ (ಆಶ್ರಯ)ಯಲ್ಲಿ ಆರೂವರೆ ತಿಂಗಳು ಸಾದಾ ಸಜೆ ಮತ್ತು 5 ಸಾವಿರ ರು. ದಂಡ ವಿಧಿಸಿ ಆದೇಶಿಸಿದೆ.

ದಂಡದ ಮೊತ್ತದಲ್ಲಿ ಶ್ರೀಮತಿ ಶೆಟ್ಟಿ ತಾಯಿಗೆ 75 ಸಾವಿರ ರು. ಪರಿಹಾರ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.ಮರಣದಂಡನೆಗೆ ಹೈಕೋರ್ಟ್‌ಗೆ ಮೇಲ್ಮನವಿ: ಆರೋಪಿಗಳಾದ ಜೋಸನ್‌ ಸ್ಯಾಮ್ಸನ್‌ ಮತ್ತು ವಿಕ್ಟೋರಿಯಾ ಮಥಾಯಿಸ್‌ ಎಸಗಿದ ಕೃತ್ಯ ತೀರ ಭೀಭತ್ಸ ಹಾಗೂ ಅಪರೂಪದ ಪ್ರಕರಣವಾಗಿದ್ದು, 1ನೇ ಆರೋಪಿಗೆ ಮರಣದಂಡನೆ ಶಿಕ್ಷೆ ನೀಡುವ ನಿರೀಕ್ಷೆಯಿತ್ತು. ಆದರೆ ಜೀವಾವಧಿ ಶಿಕ್ಷೆ ವಿಧಿಸಿದ ಕಾರಣ 1ನೇ ಆರೋಪಿಗೆ ಮರಣದಂಡನೆ ಹಾಗೂ 3ನೇ ಆರೋಪಿಗೆ ವಿಷಯ ಗೊತ್ತಿದ್ದರೂ ಮುಚ್ಚಿಟ್ಟ ಕಾರಣ ಹೆಚ್ಚುವರಿ ಶಿಕ್ಷೆ ನೀಡುವಂತೆ ಸರ್ಕಾರದ ಮೂಲಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ನಿರ್ಧರಿಸಿದ್ದಾರೆ.

PREV

Recommended Stories

ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ
ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ