ಸಂಭ್ರಮದ ಶುಖಮುನಿ ತಾತನ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Feb 21, 2025, 12:46 AM IST
ಪೋಟೊ20ಕೆಎಸಟಿ2: ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ತಾತನವರ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಸಡಗರ ಸಂಭ್ರಮದಿಂದ ನಡೆಯಿತು | Kannada Prabha

ಸಾರಾಂಶ

ಶ್ರೀಅವಧೂತ ಶುಖಮುನಿ ಸ್ವಾಮಿಗಳ ಭಾವಚಿತ್ರವನ್ನು ದೋಟಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾಭಜಂತ್ರಿಗಳ ವಾದ್ಯಮೇಳಗಳೊಂದಿಗೆ ಹಾಗೂ ಭಜನೆಯ ಮೂಲಕ ಸಂಚರಿಸಿ ಮೆರವಣಿಗೆ ನಡೆಸಲಾಯಿತು.

ಕುಷ್ಟಗಿ:

ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಶ್ರೀಅವಧೂತ ಶುಖಮನಿ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ದಿನವಾದ ಗುರುವಾರ ಶುಖಮುನಿ ಸ್ವಾಮಿಗಳ ಭಾವಚಿತ್ರ, ಸಪ್ತಭಜನೆ ಹಾಗೂ ಪಲ್ಲಕ್ಕಿ ಉತ್ಸವ, ಅನ್ನದಾಸೋಹ ಕಾರ್ಯಕ್ರಮ ಸಡಗರ-ಸಂಭ್ರಮದಿಂದ ಜರುಗಿದವು.

ಬೆಳಗ್ಗೆ ಶ್ರೀಅವಧೂತ ಶುಖಮುನಿ ಸ್ವಾಮಿಗಳ ಭಾವಚಿತ್ರವನ್ನು ದೋಟಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾಭಜಂತ್ರಿಗಳ ವಾದ್ಯಮೇಳಗಳೊಂದಿಗೆ ಹಾಗೂ ಭಜನೆಯ ಮೂಲಕ ಸಂಚರಿಸಿ ಮೆರವಣಿಗೆ ನಡೆಸಲಾಯಿತು. ನಂತರ ಸಪ್ತಭಜನೆ, ಶುಖಮುನಿ ಸ್ವಾಮಿಗಳ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ-ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಬೆಳಗ್ಗೆ 9 ಗಂಟೆ ಹೊತ್ತಿಗೆ ಶುಖಮುನಿ ತಾತನ ಪಲ್ಲಕ್ಕಿ ಉತ್ಸವವು ವಿಶೇಷ ಪೂಜೆಯೊಂದಿಗೆ ಪ್ರಾರಂಭವಾಗಿ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆಯೊಂದಿಗೆ ಸಂಚರಿಸಿತು. ಗುರುವಾರ ಆರಂಭವಾದ ಪಲ್ಲಕ್ಕಿ ಉತ್ಸವ ಒಂದು ವಾರ ದೋಟಿಹಾಳ, ಕೇಸೂರು ಹಾಗೂ ಸುತ್ತಮುತ್ತಲಿನ ಹೆಸರೂರು, ಮಾಟೂರು, ಜಾಲಿಹಾಳ, ರ್‍ಯಾವಣಕಿ, ಕಲಕೇರಿ, ನಡುವಲಕೊಪ್ಪಕ್ಕೆ ತೆರಳಿ ತಾತನ ಪಲ್ಲಕ್ಕಿ ಸಂಚರಿಸುತ್ತದೆ. ಅಲ್ಲಿಂದ ಸಾವಿರಾರು ಭಕ್ತರು ಆಗಮಿಸಿ ಮಠಕ್ಕೆ ಆಹಾರ, ದವಸ- ಧಾನ್ಯಗಳನ್ನು ಸಮರ್ಪಣೆ ಮಾಡುವ ಮೂಲಕ ಭಕ್ತಿಯಿಂದ ಮೆರೆಯುತ್ತಾರೆ.

ಪಲ್ಲಕ್ಕಿ ಉತ್ಸವ ಉಸ್ತುವಾರಿ ಜವಾಬ್ದಾರಿಯನ್ನು ಸ್ಥಳೀಯ ಯುವಕ ಸಂಘ-ಸಂಸ್ಥೆಗಳಿಗೆ ನೀಡಲಾಗಿದ್ದು ಪ್ರತಿದಿನ ಸಂಘದ ಸದಸ್ಯರ ಸಮ್ಮುಖದಲ್ಲಿ ಬೆಳಗ್ಗೆ ಮತ್ತು ರಾತ್ರಿ ತಾತನ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದೋಟಿಹಾಳ ಹಾಗೂ ಕೇಸೂರು ಗ್ರಾಪಂ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ರಸ್ತೆಗಳಲ್ಲಿ ವಿದ್ಯುತ್ ದೀಪ ಜೋಡಣೆ, ಚರಂಡಿ ಸ್ವಚ್ಛತೆ ಮತ್ತು ಸಾರ್ವಜನಿಕರ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಜಾತ್ರೆಗೆ ಬಂದಿರುವ ಭಕ್ತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಿರುವುದು ಕಂಡು ಬರುತ್ತಿದೆ.

ವಿಡಿಯೋ ಚಿತ್ರೀಕರಣ:

ಶುಖಮುನಿ ತಾತನ ಪಲ್ಲಕ್ಕಿ ಉತ್ಸವದಲ್ಲಿ ಅವಘಡಗಳು ಉಂಟಾಗಬಾರದೆಂಬ ಉದ್ದೇಶದಿಂದ ಮುಂಜಾಗ್ರತಾವಾಗಿ ತಾಲೂಕಾಡಳಿತದ ನಿರ್ದೇಶನದಂತೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಪಲ್ಲಕ್ಕಿ ಉತ್ಸವವನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಲಿದ್ದು ಅವಘಡಗಳು ನಿಯಂತ್ರಣಕ್ಕೆ ಬರಲು ಸಹಕಾರಿಯಾಗಿದೆ.ರಶೀದಿ ಪಡೆಯಿರಿ:

ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಭಕ್ತರು ಕಾಣಿಕೆ ಹಾಗೂ ದವಸ-ಧಾನ್ಯ ಕೊಡುವವರು ಕಮಿಟಿ ನೀಡಿ ರಶೀದಿ ಪಡೆಯಬೇಕು. ಸ್ವಯಂ ಪ್ರೇರಿತರಾಗಿ ಅಡುಗೆ ತಯಾರಿಸಲು ಅವಕಾಶವಿಲ್ಲ. ದಾಸೋಹದಲ್ಲಿ ಅಡುಗೆ ಮಾಡಿಸುವವರು ಕಮಿಟಿಯ ಗಮನಕ್ಕೆ ತರಬೇಕು ಎಂದು ಮಠದ ಕಮಿಟಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''