ಕನ್ನಡಪ್ರಭ ವಾರ್ತೆ, ತುಮಕೂರು
ಕಳೆದ 61 ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವ ಶ್ರೀಸಿದ್ದಲಿಂಗೇಶ್ವರ ಕೃಷಿ ಕೈಗಾರಿಕಾ ವಸ್ತು ಪ್ರದರ್ಶನ ಸುತ್ತಮುತ್ತಲ ಜನರಿಗೆ ದೊಡ್ಡ ಮಾಹಿತಿ ಕೇಂದ್ರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಅಭಿಪ್ರಾಯಪಟ್ಟಿದ್ದಾರೆ.ಸಿದ್ದಗಂಗಾ ಮಠದಲ್ಲಿ ಆಯೋಜಿಸಿದ್ದ 61ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮುಕ್ತಾಯ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ನಾನು ಚಿಕ್ಕಂದಿನಿಂದಲೂ ನಮ್ಮ ತಂದೆ ತಾಯಿಗಳ ಜೊತೆ, ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಖುಷಿ ಪಟ್ಟ ದಿನಗಳಿವೆ. ಇಂದಿಗೂ ಅಷ್ಟೇ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದ್ದು, ಇದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸರಕಾರದ ಪ್ರತಿ ಇಲಾಖೆಯೂ ಇಲ್ಲಿ ಮಳಿಗೆ ತೆರೆದು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತಿದ್ದಾರೆ. ಇದಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದರು.ಒಬ್ಬ ಅಜ್ಞಾನಿ, ಜ್ಞಾನಿಯಾಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿದ್ದ ಡಾ.ಶಿವಕುಮಾರ ಸ್ವಾಮೀಜಿಗಳು, ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾವಿರಾರು ಬಡ ಮಕ್ಕಳಿಗೆ ಅಕ್ಷರದ ಜೊತೆಗೆ, ಅನ್ನ, ಆಶ್ರಯ ನೀಡಿ ಪೊರೆಯುವ ಕೆಲಸ ಮಾಡಿದರು. ಇಂದಿಗೂ ಒಂದೇ ಕಡೆಗೆ 10 ಸಾವಿರಕ್ಕೂ ಹೆಚ್ಚುಮಕ್ಕಳಿಗೆ ಅನ್ನ, ಆಶ್ರಯ ಒದಗಿಸಿ ಒಂದು ಪವಾಡವನ್ನೇ ಸೃಷ್ಟಿಸಿದ್ದಾರೆ. ಪ್ರತಿ ದಿನ ನಡೆಯುವ ಸಾಮೂಹಿಕ ಪ್ರಾರ್ಥನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ.ಕೆ.ವಂಕಟ್ ಮಾತನಾಡಿ, ನಾನು ಓರ್ವ ಕೃಷಿ ಪದವಿಧರ, ನಾವುಗಳು ಕೃಷಿ ಮೇಳದ ಹೆಸರಿನಲ್ಲಿ ಸರಕಾರದ ಮಟ್ಟದಲ್ಲಿ ಆಯೋಜಿಸುವುದನ್ನು ನೋಡಿದ್ದೇವೆ. ಆದರೆ ಮಠವೊಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಯೋಜಿಸುವ ಮೂಲಕ ಹಲವರಿಗೆ ದಾರಿ ದೀಪವಾಗಿದೆ. ಸರಕಾರದ ಎಲ್ಲಾ ಇಲಾಖೆಗಳು ಇದಕ್ಕೆ ಕೈಜೋಡಿಸಿವೆ. ಶ್ರೀಸಿದ್ದಗಂಗಾ ಮಠ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಮೂಲಕ ವಿಜ್ಞಾನ ಮತ್ತು ಅಧ್ಯಾತ್ಮವನ್ನು ಒಂದೇ ವೇದಿಕೆಯಲ್ಲಿ ಸೃಷ್ಟಿಸಿದೆ ಎಂದರು.ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, 15 ದಿನಗಳ ಕಾಲ ನಡೆದ ಈ ವಸ್ತು ಪ್ರದರ್ಶನಕ್ಕೆ ಲಕ್ಷಾಂತರ ಜನರು ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಜನರಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸುವ ವೇದಿಕೆಯಾಗಿ ರೂಪಗೊಂಡಿದೆ. ಶಿವಕುಮಾರ ಸ್ವಾಮೀಜಿಗಳು, ಜಾತ್ರೆಯ ಜೊತೆಗೆ, ಉತ್ಸವ, ಎತ್ತಿನ ಜಾತ್ರೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಒಟ್ಟೊಟ್ಟಿಗೆ ನಡೆಸಿಕೊಂಡು ಬಂದಿದ್ದಾರೆ. ವಿಜ್ಞಾನದ ಜೊತೆಗೆ ,ಜ್ಞಾನ ಹಾಗೂ ಅಧ್ಯಾತ್ಮವನ್ನು ಒಟ್ಟಿಗೆ ಸಿಗಲು ಸಾಧ್ಯವಾಗಿದೆ. ಇದು ಮನುಷ್ಯನ ಅಂತರಂಗದ ಬದುಕನ್ನು ಉಜ್ವಲಗೊಳಿಸುವ ಪ್ರಕ್ರಿಯೆಯಾಗಿದೆ.ಇದಕ್ಕೆ ಶ್ರಮಿಸಿದ ಜಿ.ಪಂ ಸಿಇಒ ಜಿ.ಪ್ರಭು ಹಾಗೂ ಇತರೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗೌರವಕುಮಾರ ಶೆಟ್ಟಿ,ತಾ.ಪಂ.ಇಒ ಹರ್ಷಕುಮಾರ್, ಮೈದಾಳ ಗ್ರಾ.ಪಂ.ಅಧ್ಯಕ್ಷ ಬಿ.ಜಿ.ಉಮೇಶ್,ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ ಕಾರ್ಯದರ್ಶಿ ಪ್ರೊ.ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿಗಳಾದ ಎಸ್.ಶಿವಕುಮಾರ್, ಕೆಂ.ಬ.ರೇಣುಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.