ನಾಡಿನ ಮಠ ಪರಂಪರೆಗೆ ಸಿದ್ಧಗಂಗಾ ಮಠ ಮಾದರಿ-ಸದಾಶಿವ ಸ್ವಾಮೀಜಿ

KannadaprabhaNewsNetwork |  
Published : Jan 24, 2026, 03:30 AM IST
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಜರುಗಿದ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. | Kannada Prabha

ಸಾರಾಂಶ

ಅನ್ನ, ಅರಿವು ಮತ್ತು ಆಶ್ರಯದ ತ್ರಿವಿಧ ದಾಸೋಹದ ಮೂಲಕ ಕನ್ನಡ ನಾಡಿನ ಮಠ ಪರಂಪರೆಗಳಿಗೆ ಮಾದರಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು.

ಶಿಗ್ಗಾಂವಿ: ಅನ್ನ, ಅರಿವು ಮತ್ತು ಆಶ್ರಯದ ತ್ರಿವಿಧ ದಾಸೋಹದ ಮೂಲಕ ಕನ್ನಡ ನಾಡಿನ ಮಠ ಪರಂಪರೆಗಳಿಗೆ ಮಾದರಿ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಹೇಳಿದರು.ಮುಗಳಿ ಗ್ರಾಮದ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗ ವತಿಯಿಂದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮಿಗಳ ೭ನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನಾಚರಣೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರವೂ ದಾಸೋಹ ಪರಂಪರೆಯಿದೆ. ಸರ್ಕಾರಗಳು ಮಾಡದ ಸಮಾಜಮುಖಿ ಕಾರ್ಯಗಳನ್ನು ಮಠಗಳು ಮಾಡಿವೆ. ಸಮಾಜದ ಎಲ್ಲ ಸ್ತರದ ಮಕ್ಕಳ ಜ್ಞಾನ ಮತ್ತು ಅವರ ಹೊಟ್ಟೆಯ ಹಸಿವನ್ನು ನಿವಾರಿಸಿದ ಹಾಗೂ ವಿಶೇಷವಾಗಿ ಮಠದ ಮಕ್ಕಳ ಕಾಳಜಿ ಮಾಡುತ್ತ ಅವರಲ್ಲಿ ದೇವರನ್ನು ಕಂಡವರು ಶಿವಕುಮಾರ ಮಹಾಸ್ವಾಮಿಗಳ ವ್ಯಕ್ತಿತ್ವ ನಮಗೆ ಆದರ್ಶ ಎಂದರು. ಹಿರಿಯ ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಮಾತನಾಡಿ, ನಮ್ಮದು ಕೃಷಿ ಪರಂಪರೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಾಸೋಹ ತತ್ವ ಮೊದಲಿನಿಂದಲೂ ಇದೆ. ಆದರೆ ಮಠ ಪರಂಪರೆಯಲ್ಲಿ ತ್ರಿವಿಧ ದಾಸೋಹದ ಮೂಲಕ ಇಡೀ ನಾಡಿನ ಬಡ ಮಕ್ಕಳ ಶೈಕ್ಷಣಿಕ ಬದುಕನ್ನು ರೂಪಿಸಿದ ಶ್ರೇಯಸ್ಸು ಸಿದ್ಧಗಂಗಾ ಮಠಕ್ಕೆ ಸಲ್ಲುತ್ತದೆ. ಅಲ್ಲಿ ಅಧ್ಯಯನ ಮಾಡಿದ ಮುಗಳಿ ಗ್ರಾಮದ ವಿದ್ಯಾರ್ಥಿಗಳು ಶಿವಕುಮಾರ ಮಹಾಸ್ವಾಮಿಗಳ ಮೇಲಿನ ಅಭಿಮಾನ ಮತ್ತು ಭಕ್ತಿಯ ಪರಿಣಾಮ ದಾಸೋಹ ದಿನಾಚರಣೆ ಆಯೋಜಿಸಿರುವುದು ಶ್ಲಾಘನೀಯ. ಈ ಮೂಲಕ ಕೃತಜ್ಞತಾ ಭಾವವನ್ನು ಪ್ರದರ್ಶಿಸಿದ ಸಂಘಟನೆಯ ಸರ್ವರೂ ಅಭಿನಂದನಾರ್ಹರು ಎಂದರು. ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ತ್ರಿವಿಧ ದಾಸೋಹ ತತ್ವಕ್ಕೆ ಹೊಸ ರೂಪ ನೀಡಿದ ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಕೆ. ಪಾಟೀಲ ಮಾತನಾಡಿ, ನಮ್ಮ ಮುಗಳಿ ಗ್ರಾಮ ಮೊದಲಿನಿಂದಲೂ ಶೈಕ್ಷಣಿಕ ಕಾಳಜಿಗೆ ಆದ್ಯತೆ ನೀಡುತ್ತ ಬಂದಿದೆ. ಸಿದ್ಧಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳ ಹೆಸರಿನಲ್ಲಿ ಪ್ರತಿ ಬೇಸಿಗೆಯಲ್ಲಿ ಶಿಬಿರ ಆಯೋಜಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಹಕಾರ ನೀಡಬೇಕು ಎಂದರು. ಮಠದ ವಿದ್ಯಾರ್ಥಿಗಳಾದ ಈಶ್ವರಗೌಡ ಪಾಟೀಲ ಹಾಗೂ ಉಳವಪ್ಪ ಅಮಾತ್ಯೆಣ್ಣನವರ ಮಠದಲ್ಲಿನ ಅನುಭವ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಗ್ರಾಮದ ಸಾಧಕರಾದ ರಾಜಯೋಗಿನಿ ಬಿ.ಕೆ. ಮಧುಕೇಶ್ವರಿ, ರಾಜಯೋಗಿನಿ ಸವಿತಕ್ಕ, ಡಾ.ಬಸನಗೌಡ ಪಾಟೀಲ, ನಾಗರಾಜ ಹುಲಗೂರ ಮತ್ತು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸುಜಲಾನ್ ಸಿಎಸ್‌ಆರ್ ಕೇಂದ್ರೀಯ ವ್ಯವಸ್ಥಾಪಕ ದೀಪಕ್ ಕ್ಷೀರಸಾಗರ, ಎರಡು ಸಾವಿರ ಗುಬ್ಬಚ್ಚಿ ಗೂಡುಗಳನ್ನು ಶಾಲೆಗೆ ನೀಡಿದರು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಶಿವಪ್ಪ ಅರಳಿಕಟ್ಟಿ, ಮುಖಂಡರಾದ ಶಿವಾನಂದ ರಾಮಗೇರಿ, ತಿಪ್ಪಣ್ಣ ಸಾತಣ್ಣವರ, ಎಸ್.ವಿ. ಕಟಗಿಹಳ್ಳಿಮಠ, ಸಿ.ಎನ್. ಕುಂಬಾರ, ಶಂಭುಲಿಂಗಪ್ಪ ರಾಮಗೇರಿ, ಎಚ್.ಎಫ್. ಅಕ್ಕಿ, ಶಿವಾನಂದ ಕುನ್ನೂರ, ಶರಣಪ್ಪ ಕಂದಗಲ್ಲ, ವಿ.ಜಿ. ದುಂಡಪ್ಪನವರ, ಶಂಕರಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ ಸಕ್ರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಣುಕಾ ಬಿಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ನಿಂಗಪ್ಪ ದುಂಡಪ್ಪನವರ, ಶಿವಾನಂದ ಬಿಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಮೀರಾಬಾಯಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಈಶ್ವರ ಕಾಲವಾಡ, ಶ್ರೀ ಮಲ್ಲಿಕಾರ್ಜುನ ಯುವಕ ಸಂಘದ ಅಧ್ಯಕ್ಷ ಶಂಕರ ಗೊಬ್ಬಿ ಉಪಸ್ಥಿತರಿದ್ದರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಹನುಮಂತಪ್ಪ ಬೆಂಗೇರಿ ಸ್ವಾಗತಿಸಿದರು. ನಿಂಗಪ್ಪ ಸಕ್ರಿ ಹಾಗೂ ಮಂಜುನಾಥ ಬಿಶೆಟ್ಟಿ ನಿರೂಪಿಸಿದರು. ಸುರೇಶ ಅರಳಿಕಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ