ಡಂಬಳ: ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀ ನಾಡು ಕಂಡ ಕನ್ನಡದ ಕುಲಗುರು, ಕೋಮು ಸೌಹಾರ್ದತೆಯ ಹರಿಕಾರರು, ಜನಸಾಮಾನ್ಯರ ಸ್ವಾಮೀಜಿ, ಪುಸ್ತಕ ಸ್ವಾಮೀಜಿ, ತ್ರಿವಿಧ ದಾಸೋಹಿಗಳು, ಪರಿಸರ ಪ್ರೇಮಿಗಳು, ನೆಲ, ಜಲ, ಭಾಷೆ, ನಾಡು ನುಡಿಗಾಗಿ ನಿರಂತರ ಹೋರಾಡಿದ ಮಹಾನ್ ಶರಣರು ಆಗಿದ್ದರು ಎಂದು ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗು ಸೊಲಗಿ ತಿಳಿಸಿದರು.
ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಡಿ ಮೊದಲು ತಾವೇ ಪಲ್ಲಕ್ಕಿಯಲ್ಲಿ ಕೂರುವುದನ್ನು ತ್ಯಜಿಸಿದರು. ವಚನದ ಕಟ್ಟುಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ಅದರ ಮುಂದೆ ಪಾದಚಾರಿಗಳಾಗಿ ವೈಚಾರಿಕತೆಯ ಮೇಲ್ಪಂಕ್ತಿಯನ್ನು ಹಾಕಿದರು. ಜಾತ್ರೆಗಳು ಜನರ ಮನಸ್ಸು ಕಟ್ಟುವ ಕೆಲಸ ಮಾಡಬೇಕೆಂದು ರೊಟ್ಟಿ ಜಾತ್ರೆಗೆ ಚಾಲನೆ ಕೊಟ್ಟರು.
ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು ಕೃಷಿಗೆ ಮಾದರಿಯಾದರು. ಕನ್ನಡ ಕವಿಗಳು, ಲೇಖಕರು ಬರೆದಂತಹ ಪುಸ್ತಕಗಳನ್ನು ಪ್ರತಿವರ್ಷ ಶ್ರೀಮಠದ ಕಾರ್ಯಕ್ರಮಗಳಲ್ಲಿ ಪ್ರಕಟ ಮಾಡಿ ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಶ್ರೀಗಳು ಮಾಡಿದ್ದರು ಎಂದರು.ಡಂಬಳ ಮಠದ ಆಡಳಿತಾಧಿಕಾರಿ ಜಿ.ವಿ. ಹಿರೇಮಠ ಮಾತನಾಡಿ, ಗ್ರಾಮೀಣ ಭಾಗದಲ್ಲಿ 1983ರಲ್ಲಿ ಐಟಿಐ ಸಂಸ್ಥೆಗಳನ್ನು ತೆರೆದು ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿ ಮಾಡಿ ಗ್ರಾಮೀಣ ಪ್ರದೇಶದ ಬಡ ಹಿಂದುಳಿದ ಯುವಕರ ಸ್ವಾವಲಂಬನೆ ಬದುಕಿಗೆ ಮುನ್ನುಡಿ ಬರೆದರು. ಶ್ರೀಮಠದಿಂದ ದೀನ ದಲಿತರ, ನಿರ್ಗತಿಕರ ಬದುಕನ್ನು ಕಟ್ಟಿಕೊಳ್ಳಲು ಆಕಳುಗಳನ್ನು ದಾನವಾಗಿ ಕೊಡುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ವಿರುಪಾಕ್ಷಪ್ಪ ಲಕ್ಕುಂಡಿ, ಮಹೇಶಗೌಡ ಗೌಡರ,ಸಂಸ್ಥೆಯ ತರಬೇತಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ತರಬೇತಿದಾರರು, ವಿದ್ಯಾರ್ಥಿಗಳು ಇದ್ದರು. ರಮೇಶ ಕೊರ್ಲಹಳ್ಳಿ ನಿರೂಪಿಸಿದರು. ಸುರೇಶ ಕುಂಬಾರ ವಂದಿಸಿದರು.