ಗೊಂದಲದ ಗೂಡಾದ ಸಿದ್ದಾಪುರ ಪಂಚಾಯಿತಿ ಗ್ರಾಮ ಸಭೆಅಭಿವೃದ್ಧಿ ವಿಚಾರ ಬಿಟ್ಟು ಸದಸ್ಯರ ಆರೋಪಕ್ಕೆ ಸೀಮಿತ

KannadaprabhaNewsNetwork | Published : Feb 16, 2024 1:52 AM

ಸಾರಾಂಶ

ಸದಸ್ಯರ ನಡುವಿನ ಆರೋಪ ಪ್ರತ್ಯಾರೋಪಗಳಿಂದ ಗೊಂದಲದ ಗೂಡಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಸದಸ್ಯರ ನಡುವಿನ ಆರೋಪ ಪ್ರತ್ಯಾರೋಪಗಳಿಂದ ಗೊಂದಲದ ಗೂಡಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು.

ಸಿದ್ದಾಪುರ ಪಂಚಾಯಿತಿ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಶ್ರೀನಿವಾಸ ಸಭೆಗೆ ತಡವಾಗಿ ಆಗಮಿಸಿದಕ್ಕೆ ಎಚ್. ಬಿ. ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಈ ಸಭೆಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮಹೇಶ್ ಬರಬೇಕಾಗಿದ್ದು ಅವರ ಗೈರು ಹಾಜರಿಯಲ್ಲಿ ಪಿಡಿಓ ಅವರ ಮನವಿ ಮೇರೆಗೆ ತಾನು ಬಂದಿರುವುದಾಗಿ ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿ ಆಗಮಿಸಬೇಕಿದ್ದ ಸಿಡಿಪಿಓ ಅಧಿಕಾರಿ ವಿನಾ ಕಾರಣ ಗೈರು ಹಾಜರಾಗಿದ್ದು ಅವರಿಗೆ ಇಲಾಖಾಧಿಕಾರಿಗಳೆ ಬೆಂಬಲ ನೀಡುತ್ತಿದ್ದು ಜಿಲ್ಲಾಧಿಕಾರಿಗಳು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಒತ್ತಾಯಿಸಿದರು.

ಸಭೆಯಲ್ಲಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಣ ಮಂಜೂರಾಗದ ಬಗ್ಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಗ್ರಾಮಸ್ಥ ಅನಿಲ್ ಮತ್ತು ರೂಪೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳು ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು ಅವರಿಗೆ ಇದುವರೆಗೂ ಹಣ ಮಂಜೂರಾಗಿಲ್ಲ. ಆದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾತ್ರ ಹಣ ಮಂಜೂರಾಗಿದೆ. ಅಧ್ಯಕ್ಷರು ಅಡಿಪಾಯ ಹಾಕದೆ ಕೇವಲ ಕಲ್ಲು ಕಟ್ಟಿ ಹಣ ಪಡೆದಿದ್ದಾರೆ ಸ್ವತಃ ಅಧ್ಯಕ್ಷರೆ ಭ್ರಷ್ಟಚಾರ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ಈ ಬಗ್ಗೆ ಸದಸ್ಯರು ಗ್ರಾಮಸ್ಥರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು ಹಾಗೂ ಅನಿಲ್ ಸಭೆಯಲ್ಲಿ ಪಂಚಾಯಿತಿಗೆ ಧಿಕ್ಕಾರ ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಪಿಡಿಓ ಪ್ರತಿಕ್ರಿಯಿಸಿ ಈ ಬಗ್ಗೆ ತನಿಖೆ ನಡೆಯುತ್ತಿದ್ದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ಗ್ರಾಮಸ್ಥ ರಮೇಶ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವಿರಾಜಪೇಟೆ ತಾಲೂಕಿನಲ್ಲಿದ್ದು ಇಲ್ಲಿನ ಶಾಲೆಗಳು ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿದೆ. ಇದರಿಂದಾಗಿ ಪೋಷಕರು ಶಾಲೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳಿಗೂ ಮಡಿಕೇರಿಗೆ ತೆರಳಬೇಕಾಗಿದ್ದು ಪೋಷಕರು ಸಂಕಷ್ಟದ್ದಲ್ಲಿದ್ದು ಕಳೆದ ಹಲವಾರು ಗ್ರಾಮಸಭೆಗಳಲ್ಲಿ ಇಲ್ಲಿನ ಶಾಲೆಗಳನ್ನು ಮಡಿಕೇರಿ ವ್ಯಾಪ್ತಿಯಿಂದ ವಿರಾಜಪೇಟೆ ಶಿಕ್ಷಣ ವ್ಯಾಪ್ತಿಗೆ ತರುವಂತೆ ಒತ್ತಾಯಿಸುತ್ತಿದ್ದೇವೆ. ಈ ವರೆಗೂ ಸಾಧ್ಯವಾಗಿಲ್ಲ ಯಾಕೆ ಎಂದು ಪಂಚಾಯಿತಿಯನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಪಂಚಾಯಿತಿ ಭಾಗದಿಂದ ಇಲಾಖೆಗಳಿಗೆ ಪತ್ರ ಬರೆಯಲಾಗಿದ್ದು ಶಾಸಕರ ಗಮನಕ್ಕೂ ತರಲಾಗಿದೆ. ಮುಂದೆ ಸರಿಪಡಿಸಲು ಹೆಚ್ಚಿನ ಶ್ರಮ ವಹಿಸಲಾಗುವುದು ಎಂದರು.

ಗ್ರಾಮಸ್ಥರು ವಾರ್ಡಿನ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಗ್ರಾಮ ಪಂಚಾಯಿತಿ ಸದಸ್ಯರು ಮಧ್ಯೆ ಪರಸ್ಪರ ಆರೋಪಗಳು ಪ್ರತ್ಯಾರೋಪಗಳನ್ನು ಮಾಡುತ್ತಾ ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಪಿಡಿಓ ಸದಸ್ಯರಿಗೆ ಮಾತನಾಡಲು ಸಾಮಾನ್ಯ ಸಭೆಗಳಿವೆ. ನೀವು ಅಲ್ಲಿ ಮಾತನಾಡಿ, ಇದು ಗ್ರಾಮಸ್ಥರ ಸಭೆ ಇಲ್ಲಿ ನೀವು ಪರಸ್ಪರ ನಿಂದಿಸುವ ಆರೋಪ ಮಾಡುವುದು ಸರಿಯಲ್ಲ ಎಂದು ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದ್ದ ಗ್ರಾಮಸಭೆ ಸದಸ್ಯರ ಬೇಜವಾಬ್ದಾರಿಗೆ ಸಾಕ್ಷಿಯಾಯಿತು.ಸಭೆಯಲ್ಲಿ ಪಿಡಿಓ ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕರು, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

Share this article