ಈ ಬಾರಿಯೂ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನ ಲಭಿಸಲ್ಲ : ಜೋಶಿ

KannadaprabhaNewsNetwork | Updated : May 04 2024, 01:13 PM IST

ಸಾರಾಂಶ

ಪ್ರಜ್ವಲ್​ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ. 21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್‌ಐಆರ್​ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ

ಹುಬ್ಬಳ್ಳಿ:  ಪ್ರಜ್ವಲ್‌ ರೇವಣ್ಣ ಅವರಿಗೆ ಈಗ ಲುಕ್‌ಔಟ್‌ ನೋಟಿಸ್‌ ಕೊಟ್ಟಿದ್ದಾರೆ. ಮೊದಲೇ ಎಫ್‌ಐಆರ್‌ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್‌, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್​ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ. 21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್‌ಐಆರ್​ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದರು.

ಪ್ರಜ್ವಲ್ ಸಹೋದರ ಪೆನ್‌ಡ್ರೈವ್​ಗೆ ಸಂಬಂಧಿಸಿದಂತೆ ನನ್ನನ್ನು ಭೇಟಿ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಆಗ ಯಾಕೆ ತಕ್ಷಣ ಕ್ರಮಕೈಗೊಳ್ಳಲಿಲ್ಲ? ಈ ಪ್ರಕರಣ ಗಂಭೀರ ಸ್ವರೂಪದ್ದು ಎಂದು ಗೊತ್ತಿದ್ದರೂ ಆರಾಮವಾಗಿ ಮಲಗಿ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಾ? ವೀಸಾ, ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌(ರಾಜತಾಂತ್ರಿಕ ಪಾಸ್‌ಪೋರ್ಟ್‌) ಕೊಟ್ಟಿದ್ದೀರಾ ಎಂದು ಹೇಳುತ್ತಿದ್ದೀರಾ. ನಾಚಿಕೆ, ಮಾನ-ಮರ್ಯಾದೆ ಇದ್ದವರು ಈ ರೀತಿ ಮಾತನಾಡುವುದಿಲ್ಲ. ಯಾಕೆಂದರೆ ಯಾರೇ ಒಬ್ಬ ವ್ಯಕ್ತಿ ಸಂಸದನಾಗಿ ಆಯ್ಕೆಯಾದ ಮೇಲೆ ಮೂರ್‍ನಾಲ್ಕು ದಿನಗಳಲ್ಲಿ ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ಸಿಗುತ್ತದೆ ಎಂದು ತಿಳಿಸಿದರು.

ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ತೆಗೆದುಕೊಂಡರೆ ಹಲವಾರು ದೇಶಗಳಿಗೆ ವೀಸಾ ಇಲ್ಲದೇ ಹೋಗಬಹುದು. ಇಷ್ಟೂ ಗೊತ್ತಿಲ್ಲವೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಮತ್ತು ಇತರೆ ಕಾಂಗ್ರೆಸ್​ ನಾಯಕರಿಗೆ? ಎಲ್ಲವನ್ನೂ ಕೇಂದ್ರದ ಮೇಲೆ ಹಾಕಬೇಕೆಂಬುದು ಇವರ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣದ ಬಗ್ಗೆ ಜೋಶಿಯವರಿಗೆ ಎಲ್ಲವೂ ಗೊತ್ತಿತ್ತು, ಅದರೂ ಅವರು ಯಾಕೆ ಮುಚ್ಚಿಟ್ಟರು ಎಂಬ ಸಚಿವ ದಿನೇಶ್​ ಗುಂಡೂರಾವ್​ ಆರೋಪಕ್ಕೆ ಪ್ರತಿಕ್ರಿಯಿಸಿ, ಗುಂಡೂರಾವ್ ಗೆ ನನಗೆ ಎಲ್ಲವೂ ಗೊತ್ತಿತ್ತೆಂದು ಕನಸು ಬಿದ್ದಿತ್ತಾ?. ಅವರು ​ ಬೆಂಗಳೂರಿನಲ್ಲಿರುವವರು, ನಾನು ಹುಬ್ಬಳ್ಳಿಯಲ್ಲಿರುವವನು. ಗುಂಡೂರಾವ್​ ಮಂತ್ರಿಯಾಗಿದ್ದಾರೆ, ಅವರಿಗೇ ಗೊತ್ತಿಲ್ಲ ಎಂದರೆ ನನಗೆ ಗೊತ್ತಿರುತ್ತಾ? ಗುಂಡೂರಾವ್ ಸೆನ್ಸಿಟಿವ್ ರಾಜಕಾರಣಿ ಎಂದು ನಾನಂದುಕೊಂಡಿದ್ದೇನೆ. ರಾಹುಲ್​ ಗಾಂಧಿ ಅವರಂತೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.

ಈ ಬಾರಿಯೂ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನ ಲಭಿಸಲ್ಲ

ಕಾಂಗ್ರೆಸ್ 60 ವರ್ಷ ದೇಶದ ಜನತೆಗೆ ಮಕ್ಮಲ್‌ ಟೋಪಿಯನ್ನೇ ಹಾಕಿದೆ. ಹೀಗಾಗಿ ಜನ ಅಧಿಕೃತ ವಿಪಕ್ಷ ಸ್ಥಾನ ಸಹ ನೀಡಿಲ್ಲ. ಈಗಲೂ ನೀಡಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.

ಕಾಂಗ್ರೆಸ್‌ನ ಮಕ್ಮಲ್‌ ಟೋಪಿ ಜಾಹೀರಾತಿಗೆ ಪ್ರತಿಕ್ರಿಯೆ ನೀಡಿದ ಅವರು, 2004ರಿಂದ 14ರ ವರೆಗೆ ರಾಜ್ಯದ ಬರ ಪ್ರವಾಹದ ಒಟ್ಟು ಬೇಡಿಕೆ ₹ 44,638 ಕೋಟಿ ಬೇಡಿಕೆ ಇಟ್ಟಿತ್ತು.‌ ಆಗ ಆಡಳಿತದಲ್ಲಿ ಕಾಂಗ್ರೆಸ್ ನೀಡಿದ್ದು,‌ ₹ 7,193 ಕೋಟಿ ಅದು ರಾಜ್ಯದ ಪರಿಹಾರ ಸೇರಿ. ನಾವು ಆಡಳಿತದಲ್ಲಿದ್ದಾಗ ನೀಡಿದ್ದು ₹ 15,308 ಕೋಟಿ. ನಾವು ಕೊಟ್ಟ ಪರಿಹಾರ ಶೇ.51. ಕಾಂಗ್ರೆಸ್ ಪರಿಹಾರ ಶೇ.15ರಷ್ಟು. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿ‌‌ ನಿಮ್ಮ ಶಹಜಾದ್‌ಗೆ (ಯುವರಾಜ) ಕೊಟ್ಟಿದ್ದಿರಾ? ಇಲ್ಲ ವಸೂಲಿಗೆ ಒಬ್ಬರು ಬರುತ್ತಾರಲ್ಲ ಅವರಿಗೆ ಕೊಟ್ಟಿದ್ದಿರಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ಸುರ್ಜೇವಾಲಾ ವಿರುದ್ಧ ಕಿಡಿಕಾರಿದರು.

Share this article