ಸಿದ್ದರಾಮಯ್ಯ ಬಜೆಟ್‌: ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : Feb 17, 2024 1:17 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ನ್ನು ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಜಿಲ್ಲೆಯ ಶಾಸಕರು ಹಾಗೂ ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಹಾಗೂ ಮಾಜಿ ಶಾಸಕರು ಇದು ಚುನಾವಣೆಯ ಬಜೆಟ್ ಅಷ್ಟೇ. ಇದರಲ್ಲಿ ಕೊಡಗಿಗೆ ಕೊಡುಗೆ ಏನೂ ಇಲ್ಲ. ನಮ್ಮ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತಿತ್ತು. ಇವರು ಏನೂ ಕೊಟ್ಟಿಲ್ಲ ಎಂದು ಟೀಕಿಸಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆಗಳ ಬೇಡಿಕೆ ಈಡೇರದಿದ್ದರೂ ಕೆಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಬಜೆಟ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಜಿಲ್ಲೆಯ ಶಾಸಕರು ಹಾಗೂ ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಆದರೆ ಬಿಜೆಪಿ ಹಾಗೂ ಮಾಜಿ ಶಾಸಕರು ಇದು ಚುನಾವಣೆಯ ಬಜೆಟ್ ಅಷ್ಟೇ. ಇದರಲ್ಲಿ ಕೊಡಗಿಗೆ ಕೊಡುಗೆ ಏನೂ ಇಲ್ಲ. ನಮ್ಮ ಅವಧಿಯಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತಿತ್ತು. ಇವರು ಏನೂ ಕೊಟ್ಟಿಲ್ಲ ಎಂದು ಟೀಕಿಸಿದೆ. ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಕೂಡ ಕಾಂಗ್ರೆಸ್ ಶಾಸಕರು ಇರುವುದರಿಂದ ಜಿಲ್ಲೆಗೆ ಹೆಚ್ಚಿನ ಯೋಜನೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಪ್ರಮುಖ ಬೇಡಿಕೆ ಬಜೆಟ್ ನಲ್ಲಿ ಈಡೇರಿಲ್ಲ ಎಂಬುದು ಕೆಲವರ ಅಸಮಾಧಾನವಾದರೆ, ಇದು ಸಮಾಧಾನಕರ ಬಜೆಟ್ ಎಂಬುದು ಮತ್ತೂ ಕೆಲವರ ಅಭಿಪ್ರಾಯವಾಗಿದೆ.

ಕೊಡಗಿಗೆ ಉಲ್ಲೇಖಗಳು: ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆಹಚ್ಚಲು ವೈರಲ್ ರೀಸರ್ಚ್ ಮತ್ತು ಡಯಾಗ್ನೋಸ್ಟಿಕ್‌ ಲ್ಯಾಬೋರೇಟರಿ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ. ಕೊಡಗಿನ ಪೊನ್ನಂಪೇಟೆಯಲ್ಲಿ ರು.5 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಿಸಲಾಗುದು ಎಂದು ಘೋಷಿಸಲಾಗಿದೆ. ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ರು.12 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.ಪ್ರಾದೇಶಿಕ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಮಡಿಕೇರಿ ಸೇರಿದಂತೆ ಉಡುಪಿ, ಚಿಕ್ಕಬಳ್ಳಾಪುರ, ನೆಲಮಂಗಲ, ಮಧುಗಿರಿ ಹಾಗೂ ಹುಣಸೂರಿನಲ್ಲಿ ಅಂದಾಜು ರು.36 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಚಟುವಟಿಕೆ ಆಧಾರಿತ ಪರಿಸರವನ್ನು ಒದಗಿಸಲು ಈಗಾಗಲೇ ಅನುಮೋದನೆಗೊಂಡಿರುವ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳನ್ನು ಮಡಿಕೇರಿಯಲ್ಲಿ ನಿರ್ಮಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯದಲ್ಲಿ 7 ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈ ಕಾರ್ಯಪಡೆಯನ್ನು ಬಲಪಡಿಸಲು ರು.40 ಕೋಟಿ ಅನುದಾನವನ್ನು ನೀಡಲಾಗುತ್ತಿದೆ. ಮಾನವ- ವನ್ಯಜೀವಿ ಸಂಘರ್ಷ ತಡೆಯಲು ಅಗತ್ಯವಾದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಈ ಹಿಂದಿನ ಬಜೆಟ್ ನಲ್ಲಿ ರು.100 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿಯೂ ರೈಲ್ವೆ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂದಷ್ಟೇ ಉಲ್ಲೇಖಿಸಲಾಗಿದೆ. ಕಾಫಿ ಮಂಡಳಿ ಸಹಭಾಗಿತ್ವದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡುವುದರೊಂದಿಗೆ 2500 ಕಾಫಿ ಕಿಯೋಸ್ಕ್‌ಗಳನ್ನು ರು.25 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್, ರೋಪ್ ವೇ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಆದರೆ ಇದು ಕೊಡಗಿಗೆ ಅನ್ವಯ ಆಗಲಿದೆಯೇ ಎಂದು ಕಾದುನೋಡಬೇಕಿದೆ. ಜಿಲ್ಲೆಯ ಶಾಸಕರು ಪ್ರಯತ್ನಿಸಿದರೆ ಈ ಯೋಜನೆಯನ್ನು ಕೊಡಗಿಗೆ ತರಬಹುದಾಗಿದೆ. -------------------ಕೊಡಗಿನ ಪ್ರಮುಖ ನಿರೀಕ್ಷೆಗಳು ಹುಸಿ!ಬಜೆಟ್ ನಲ್ಲಿ ಕೊಡಗಿಗೆ ಸಂಬಂಧಿಸಿದಂತೆ ಕೆಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಜಿಲ್ಲೆಯ ಹಲವು ಪ್ರಮುಖ ನಿರೀಕ್ಷೆಗಳು ಹುಸಿಯಾಗಿದೆ. ಬೆಳೆಗಾರರಿಗೆ 10 ಎಚ್.ಪಿ. ಪಂಪ್ ಸೆಟ್ ಉಚಿತ ವಿದ್ಯುತ್ ಪ್ರಸ್ತಾಪ ಮಾಡಿಲ್ಲ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಬೆಳೆಗಾರರು ಸರ್ಕಾರದ ಗಮನ ಸೆಳೆದಿದ್ದರು.

ಅಲ್ಲದೆ ಜಿಲ್ಲೆಯಲ್ಲಿ ಪ್ರಮುಖವಾಗಿ ಮಾನವ-ವನ್ಯಪ್ರಾಣಿ ಸಂಘರ್ಷಕ್ಕೆ ಶಾಶ್ವತ ಕ್ರಮಕ್ಕೆ ಯೋಜನೆ ರೂಪಿಸಿಲ್ಲ. ಬದಲಾಗಿ ತಾತ್ಕಾಲಿಕ ಪರಿಹಾರವಷ್ಟೇ ಈ ಬಜೆಟ್ ನಲ್ಲಿ ದೊರಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಬಾರಿ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಅನ್ನು ಕೊಡಗು ಜಿಲ್ಲೆಗೆ ನೀಡಲಾಗುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಾಗಿಲ್ಲ.

ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವು ಯೋಜನೆಯನ್ನು ಘೋಷಿಸಲಾಗಿದ್ದರೂ ಕೂಡ ಕೊಡಗಿಗೆ ವಿಶೇಷವಾಗಿ ಯಾವುದೇ ಯೋಜನೆ ನೀಡಿಲ್ಲ. ಇದಲ್ಲದೆ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಕೂಡ ಯಾವುದೇ ಪ್ರಸ್ತಾಪ ಇಲ್ಲದಿರುವುದು ಹಲವು ನಿರೀಕ್ಷೆಯಲ್ಲಿದ್ದವರಿಗೆ ನಿರಾಶೆ ಮೂಡಿಸಿದೆ. ----------ಈ ಬಜೆಟ್ ನಲ್ಲಿ ಜಿಲ್ಲೆಗೆ ವಿಶೇಷವಾಗಿ ಏನೂ ಕೊಡುಗೆ ಇಲ್ಲ. ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಇವರು ಚುನಾವಣೆ ಮುಂದಿಟ್ಟುಕೊಂಡು ಕೆಲವು ಘೋಷಣೆ ಮಾಡುವ ಮೂಲಕ ಜನರ ಕಣ್ಣೊರೆಸುವ ಬಜೆಟ್ ಇದಾಗಿದೆ. ಕಾಡಾನೆ-ಮಾನವ ಸಂಘರ್ಷ ಶಾಶ್ವತ ಕ್ರಮಕ್ಕೆ ಯಾವುದೇ ಅನುದಾನ ಮೀಸಲಿರಿಸಿಲ್ಲ. -ನಾಪಂಡ ರವಿ ಕಾಳಪ್ಪ, ಅಧ್ಯಕ್ಷ ಕೊಡಗು ಜಿಲ್ಲಾ ಬಿಜೆಪಿ.

ಇದು ದೂರದೃಷ್ಟಿಯ ಬಜೆಟ್ ಅಲ್ಲ. ಚುನಾವಣೆ ಬಜೆಟ್ ಅಷ್ಟೇ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಿಲ್ಲ. ರೈತರಿಗೆ ಸಬ್ಸಿಡಿ ಕೂಡ ಘೋಷಣೆ ಮಾಡಿಲ್ಲ. ಅಭಿವೃದ್ಧಿ ಪರ ಬಜೆಟ್ ಅಲ್ಲ. ಜಿಲ್ಲೆಗೆ ಏನು ಕೂಡ ನೀಡಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುತ್ತಾರೆಂದು ಹೇಳುತ್ತಿದ್ದರು. ಆದರೆ ಕೊಡಗನ್ನು ಕಡೆಗಣಿಸಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಲಾಗಿತ್ತು. -ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಶಾಸಕ.

ಜನಪರ ಬಜೆಟ್ ಮಂಡಿಸುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ವಿಶೇಷವಾಗಿ ಕೊಡಗು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್ ನಲ್ಲಿ ಕೊಡುಗೆ ನೀಡಲಾಗಿದೆ. -ಡಾ. ಮಂತರ್ ಗೌಡ, ಮಡಿಕೇರಿ ಶಾಸಕ.

ಕೊಡಗಿನ ಜನ ಬಜೆಟ್ ನಲ್ಲಿ ಭಾರಿ ನಿರೀಕ್ಷೆ ಇಟ್ಟಿದ್ದರು. ಪ್ರವಾಸೋದ್ಯಮ, ಕಾಫಿ ಬೆಳೆಗಾರರಿಗೆ ಘೋಷಣೆ ಇರುತ್ತದೆ ಅಂದುಕೊಂಡಿದ್ದರು. ಆದರೆ ಈ ಬಜೆಟ್ ನಿಂದ ನಿರಾಶೆಯಾಗಿದೆ. ಚುನಾವಣೆಯ ದೃಷ್ಟಿ ಇಟ್ಟುಕೊಂಡು ಪೊಳ್ಳು ಬಜೆಟ್ ಇದಾಗಿದೆ. ಅನುದಾನ ಹಂಚಿಕೆಯಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿರುವುದು ಕಂಡುಬಂದಿದೆ. ಕೊಡಗನ್ನು ನಿರ್ಲಕ್ಷ್ಯ ಮಾಡಲಾಗಿದೆ. -ಕೆ.ಜಿ. ಬೋಪಯ್ಯ, ಮಾಜಿ ಶಾಸಕ.

ಕೊಡಗಿನಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದರೂ ವಿಶೇಷ ಅನುದಾನ ಅಥವಾ ಯೋಜನೆಗಳನ್ನು ಘೋಷಿಸದೇ ಇರುವುದು ನಿರಾಶೆಗೆ ಕಾರಣವಾಗಿದೆ. ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಜನರ ಕಿವಿಗೆ ಹೂ ಇಡುವ ಬಜೆಟ್ ಮಂಡಿಸಲಾಗಿದೆ. ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ.-ಶಿವಕುಮಾರ್ ನಾಣಯ್ಯ, ಜಿಲ್ಲಾ ಸಂಚಾಲಕ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ.

ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿದೆ. ಕೊಡಗಿಗೆ ಕೂಡ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಯಿಂದ ಬೊಕ್ಕಸ ಖಾಲಿಯಾಗಿದೆ ಎನ್ನುತ್ತಿದ್ದ ವಿರೋಧ ಪಕ್ಷದವರಿಗೆ ಉತ್ತರ ನೀಡಿದ ಬಜೆಟ್ ಇದು. ಕ್ರೀಡೆಗೆ ಸಂಬಂಧಿಸದಂತೆ ಹಲವು ಯೋಜನೆ ಘೋಷಣೆ ಮಾಡಲಾಗಿದೆ.. -ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ.

Share this article