ಕೇಂದ್ರ ಸರ್ಕಾರ ತಕ್ಷಣ ಬೆಲೆ ಇಳಿಸಬೇಕು: ಸಿಎಂ

KannadaprabhaNewsNetwork |  
Published : Jun 17, 2024, 01:30 AM ISTUpdated : Jun 17, 2024, 05:22 AM IST
ಸಿದ್ದರಾಮಯ್ಯ | Kannada Prabha

ಸಾರಾಂಶ

ಕರ್ನಾಟಕದ ತೆರಿಗೆ ದಕ್ಷಿಣ ಭಾರತದಲ್ಲೇ ಕಡಿಮೆಯಿರುವುದಾಗಿ ತೈಲ ದರ ಏರಿಕೆಯನ್ನು ಬಲವಾಗಿ ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಕೂಡಲೇ ತೆರಿಗೆಯನ್ನು ಇಳಿಸಬೇಕು ಎಂದು ಆಗ್ರಹಿಸಿದ್ದಾರೆ.

 ಬೆಂಗಳೂರು‘    :  ಕೇಂದ್ರ ಸರ್ಕಾರ ಅನರ್ಥ ಆರ್ಥಿಕ ನೀತಿಯಿಂದ ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸುತ್ತಿದೆ. ಕೇಂದ್ರವು ಪೆಟ್ರೋಲ್‌, ಡೀಸೆಲ್‌ ಮೇಲಿನ ದುಬಾರಿ ಅಬಕಾರಿ ಸುಂಕದ ಮೂಲಕ ಜನರನ್ನು ಶೋಷಿಸುತ್ತಿದೆ. ಜನಹಿತದ ದೃಷ್ಟಿಯಿಂದ ತಕ್ಷಣ ಈ ತೆರಿಗೆಯನ್ನು ಇಳಿಕೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸಮರ್ಥಿಸಿ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.21 ರು.ಗಳಿಂದ 32.98 ರು.ಗೆ ಹಾಗೂ ಡೀಸೆಲ್‌ ಮೇಲೆ 3.45 ರಿಂದ 31.84 ರು.ಗೆ ಹೆಚ್ಚಳ ಮಾಡಿತ್ತು. ಪರಿಷ್ಕರಣೆ ಹೊರತಾಗಿಯೂ ಈಗಲೂ ಭಾರಿ ಮೊತ್ತದ ತೆರಿಗೆ ಸಂಗ್ರಹಿಸುತ್ತಿದ್ದು, ಇದು ನಿಜವಾಗಿಯೂ ಜನರ ಮೇಲಿನ ಹೊರೆಯಾಗುತ್ತಿದೆ ಎಂದು ಕೇಂದ್ರ ಬಿಜೆಪಿಯ ನೀತಿಯ ವಿರುದ್ಧ ಹರಿಹಾಯ್ದಿದ್ದಾರೆ.‘

ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವ ಕೆಲಸ ಮಾಡಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸಿತ್ತು. ಇದೇ ವೇಳೆ ತನ್ನ ಪಾಲಿನ (ಕೇಂದ್ರ) ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದರೆ, ಇದೇ ವೇಳೆ ಕೇಂದ್ರವು ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸಿತ್ತು’ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಕೇಂದ್ರ ಸರ್ಕಾರ ತೆರಿಗೆ ಇಳಿಸಲಿ:ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 9.21 ರು.ಗಳಿಂದ 32.98 ರು.ಗೆ ಹಾಗೂ ಡೀಸೆಲ್‌ ಮೇಲೆ 3.45 ರಿಂದ 31.84 ರು.ಗೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ. ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ 19.9 ರು. ಹಾಗೂ ಡೀಸೆಲ್‌ ಮೇಲೆ 15.8 ರು. ಇದೆ. ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನರ ಹಿತ ಬೇಕಿದ್ದರೆ ಈ ತೆರಿಗೆ ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಜ್ಯದ ತೆರಿಗೆ ದಕ್ಷಿಣ ಭಾರತದಲ್ಲೇ ಕಡಿಮೆ:ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.29.80ಕ್ಕೆ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ.18.44 ರವರೆಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್ ) 25% ಜೊತೆಗೆ ಹೆಚ್ಚುವರಿ ತೆರಿಗೆ 5.12 ರು. ಇದೆ.ಹಾಗೂ ಡೀಸೆಲ್‌ ಮೇಲೆ 21% ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ.ರಾಜ್ಯದಲ್ಲಿ ಡೀಸೆಲ್‌ ಬೆಲೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ. ಪೆಟ್ರೋಲಿಯಂ ಉತ್ಪನ್ನಗಳ ದರವು ಜನರಿಗೆ ಹೊರೆಯಾಗದ ರೀತಿಯಲ್ಲಿ ಲಭ್ಯವಾಗಿಸಲು ನಾವು ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ತೆರಿಗೆ ಬದಲಾವಣೆಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ ಎಂಬ ಗ್ಯಾರಂಟಿಯನ್ನು ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

-----ರಾಜ್ಯ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿರುವ ವಿಚಾರ ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಘಟಾನುಘಟಿ ನಾಯಕರು ಈ ಬಗ್ಗೆ ಆರೋಪ, ಪ್ರತ್ಯಾರೋಪಕ್ಕೆ ಇಳಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!