ರಾಜ್ಯದ ಬಡವರಿಗೆ ಸಿದ್ದರಾಮಯ್ಯ, ಡಿಕೆಶಿ ಅನ್ಯಾಯ

KannadaprabhaNewsNetwork |  
Published : Dec 31, 2025, 03:15 AM IST
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅ‍ವರು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಪೈಪೋಟಿಗೆ ಬಿದ್ದಿದ್ದು, ರಾಜ್ಯದ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಕಡು ಬಡವರಿಗೆ ಮನೆ ಕೊಟ್ಟು ಆಮೇಲೆ ಅಕ್ಕಪಕ್ಕದ ನಾಡಿನ ಜನರ ಬಗ್ಗೆ ಚಿಂತಿಸಲಿ. ಸಿದ್ದರಾಮಯ್ಯ ಅವರು ಕನ್ನಡನಾಡಿನ ಸಿಎಂ. ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಪೈಪೋಟಿಗೆ ಬಿದ್ದಿದ್ದು, ರಾಜ್ಯದ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಕಡು ಬಡವರಿಗೆ ಮನೆ ಕೊಟ್ಟು ಆಮೇಲೆ ಅಕ್ಕಪಕ್ಕದ ನಾಡಿನ ಜನರ ಬಗ್ಗೆ ಚಿಂತಿಸಲಿ. ಸಿದ್ದರಾಮಯ್ಯ ಅವರು ಕನ್ನಡನಾಡಿನ ಸಿಎಂ. ಕನ್ನಡಿಗರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರ ಮನೆಗಳನ್ನು ಹಿಂದೆ ಮುಂದೆ ನೋಡದೆ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ನೆಲಸಮ ಮಾಡಲಾಗಿತ್ತು. ಆದರೆ, ಈ ವಿಚಾರದಲ್ಲಿ ಕೇರಳ ಸಿಎಂ‌ ಪಿಣರಾಯಿ ವಿಜಯನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ‌ ವೇಣುಗೋಪಾಲ್‌ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಇಬ್ಬರೂ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.ಒಬ್ಬರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಮತ್ತೊಬ್ಬರು ಪಡೆಯುವ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಮೂರು ನಾಲ್ಕು ದಿನಗಳಲ್ಲಿ ಯೂಟರ್ನ್ ಹೊಡೆದು ಬೈಯಪ್ಪನಹಳ್ಳಿಯಲ್ಲಿರುವ ಮನೆಗಳನ್ನು ಕೊಡುವುದಕ್ಕೆ ಮುಂದಾಗಿದ್ದಾರೆ. ವಿಶೇಷ ಪ್ರಕರಣ ಅಂತ ಮನೆ ಹಂಚಿಕೆ ಮಾಡಲು ಸಿಎಂ ಘೋಷಣೆ ಮಾಡಿದ್ದಾರೆ. ರಾಜ್ಯದ ನೀತಿ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತಿರುವ ಕೇರಳದ ಕೆ.ಸಿ‌.ವೇಣುಗೋಪಾಲ್​ ನಿರ್ಧಾರ ಮಾಡಬೇಕೇ ಅಥವಾ ರಾಜ್ಯದ ಮುಖ್ಯಮಂತ್ರಿ ನಿರ್ಧಾರ ಮಾಡಬೇಕೇ? ನಿಮ್ಮ ಹೈಕಮಾಂಡ್ ಮನವೊಲಿಸಲು ಮನಸೋ ಇಚ್ಛೆ ನಿರ್ಧಾರ ತೆಗೆದುಕೊಳ್ಳುವುದೆಲ್ಲ ನಡೆಯುವುದಿಲ್ಲ ಎಂದು ಹೇಳಿದರು.

ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣವಾಗಿರುವ ಕನ್ನಡಿಗ ಬಡವರಿಗೆ ಸಿಗಬೇಕಾದ ಮನೆಗಳನ್ನು ಅಕ್ರಮ ವಲಸಿಗರಿಗೆ ಕೊಡುತ್ತೇವೆ ಎನ್ನುತ್ತಾರೆ.‌ ಜ.1ರ ನಂತರ ಮನೆ ಕೊಡುವುದಾಗಿ ಯಾವ ಆಧಾರದ ಮೇಲೆ ಭರವಸೆ ಕೊಡುತ್ತೀರಿ? ಯಾವುದೇ ನಿಯಮ‌ ಪಾಲಿಸದೆ ಎಲ್ಲವನ್ನೂ ಗಾಳಿಗೆ ತೂರಿ‌ ಕೇರಳದ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡಲು‌ ಮುಂದಾಗಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದರು.

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಮಾಡುತ್ತಾರೆ. ಪ್ರತಿ ತಿಂಗಳು ನೂರಾರು ಕೋಟಿ ಡ್ರಗ್ಸ್ ಸೀಜ್ ಮಾಡುತ್ತಿದ್ದಾರೆ. ಮೊನ್ನೆಯೂ ಬೆಂಗಳೂರಿನಲ್ಲಿ ಸೀಜ್ ಮಾಡಿದ್ದಾರೆ. ಪೊಲೀಸ್ ಇಲಾಖೆ, ಸರ್ಕಾರ, ಗೃಹ ಸಚಿವರು ಏನು ಮಾಡುತ್ತಿದ್ದಾರೆ? ಉಡ್ತಾ ಪಂಜಾಬ್ ರೀತಿ ಉಡ್ತಾ ಕರ್ನಾಟಕ ಮಾಡುವುದಕ್ಕೆ ಹೊರಟಿದ್ದಾರೆ. ಹಳ್ಳಿ ಹಳ್ಳಿಗೂ ಡ್ರಗ್ಸ್ ಸುಲಲಿತವಾಗಿ ಮಾರಾಟ ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಪತ್ರಿಕೆ ತೆಗೆದು ನೋಡಿದರೂ ನಮ್ಮ ಗ್ಯಾರಂಟಿ ಅಂತ ಇರುತ್ತಿತ್ತು. ಗೃಹಲಕ್ಷ್ಮೀಯ ಫೆಬ್ರವರಿ, ಮಾರ್ಚ್ ಎರಡು ಕಂತು ಬಂದಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ತನ್ನ ಇಲಾಖೆಯ ಆಗುಹೋಗುಗಳ ಬಗ್ಗೆ ಗೊತ್ತಿಲ್ಲ. ಐದು ಸಾವಿರ ಕೋಟಿ‌ ಹಣ ಫಲಾನುಭವಿಗಳಿಗೆ ಜಮೆ ಆಗಿಲ್ಲ. ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸಚಿವರು ಸಮರ್ಪಕ ಉತ್ತರ ಕೊಡದೇ ಇದ್ದಾಗ ಸಿಎಂ ಸ್ಪಷ್ಟಪಡಿಸಬೇಕಿತ್ತು. ಆದರೆ, ಸಿಎಂ ಈವರೆಗೂ ಇದಕ್ಕೆ ಉತ್ತರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಸಾಧ್ಯವಾಗದೆ ಅಬಕಾರಿ ಇಲಾಖೆಗೆ 35 ಪರ್ಸೆಂಟ್ ಟಾರ್ಗೆಟ್ ಏರಿಸಿ ರಾಜ್ಯವನ್ನು ಕುಡುಕರ ರಾಜ್ಯ ಮಾಡಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ. ಪೆಟ್ಟಿಗೆ ಅಂಗಡಿ ಸೇರಿ ಎಲ್ಲಿ ಬೇಕಾದರೂ ಹೆಂಡ ಸರಬರಾಜು ಮಾಡುತ್ತಿದ್ದಾರೆ. ಸರ್ಕಾರದ ಖಜಾನೆಗೆ ಹಣ ತುಂಬಿಸಲು ಆರನೇ ಗ್ಯಾರಂಟಿ ಆಗಿ ಕರ್ನಾಟಕ ರಾಜ್ಯವನ್ನು ಕುಡುಕರ ರಾಜ್ಯ ಮಾಡುತ್ತೇವೆ ಅಂತ ಘೋಷಣೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ವಿಠಲ ಹಲಗೇಕರ್, ನಿಖಿಲ್ ಕತ್ತಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ‌ ಬೆನಕೆ, ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ