- ಸರ್ಕಾರಿ ಬಸ್ ಚಾಲಕರು, ನಿರ್ವಾಹಕರಿಗೆ ಗೌರವ ಸನ್ಮಾನ ಬಸವಂತಪ್ಪ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ತಾಯಂದಿಗೆ ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಮಹಿಳೆಯರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯಿಂದ ಶಕ್ತಿ ಯೋಜನೆ ಯಶಸ್ಸಿನ ಹಿನ್ನೆಲೆ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಬಸ್ ಚಾಲಕರು, ನಿರ್ವಾಹಕರಿಗೆ ಗೌರವ ಸನ್ಮಾನ ಮಾಡಿ, ಸಿಹಿ ಹಂಚಿ ಅವರು ಮಾತನಾಡಿದರು.
ಮಹಿಳೆಯರು ದೂರದ ಊರಿಗೆ ಹೋಗಿ ಬರಲಾಗದೇ ಕಷ್ಟಪಡುತ್ತಿದ್ದರು. ಬಸ್ ಟಿಕೆಟ್ ದರ ಹೊಂದಿಸಲಾಗದೇ, ಮನೆಯ ಬಡತನಕ್ಕೆ ಅಂಜಿ ಹಿಂದೆ ಸರಿಯುತ್ತಿದ್ದರು. ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳು, ಜೀವನದಲ್ಲಿ ಹೋಗಬೇಕೆಂದುಕೊಂಡಿದ್ದರೂ ಆಗದ ನಾಡಿನ ನಾನಾ ದೇವಸ್ಥಾನಗಳಿಗೆ ತಾಯಂದಿರು ಗುಂಪು ಗುಂಪಾಗಿ ಹೋಗಿ ಬರುತ್ತಿದ್ದಾರೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆ ರಾಜ್ಯದಲ್ಲಿ 500 ಕೋಟಿ ಮತ್ತು ಜಿಲ್ಲೆಯಲ್ಲಿ 9.38 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಲಾಭ ದೊರೆತಿದೆ. ಶಕ್ತಿ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ₹9.38 ಕೋಟಿ ಮಹಿಳೆಯರಿಗೆ ಅನುಕೂಲ ಸಿಕ್ಕಿದೆ. ಇದಕ್ಕಾಗಿ ₹372.51 ಕೋಟಿಯನ್ನು ಸರ್ಕಾರ ಭರಿಸಿದೆ. ಬಡಮಹಿಳೆಯರು ಸರ್ಕಾರದ ಯೋಜನೆಗಳಿಂದ ಸಂತುಷ್ಟರಾಗಿದ್ದಾರೆ ಎಂದರು.
ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣಕುಮಾರ ಮಾತನಾಡಿ, ಶಕ್ತಿ ಯೋಜನೆ ಅತ್ಯಂತ ಯಶಸ್ವಿಯಾಗಿದೆ. 11.7.2025 ರವರೆಗೆ ವಯಸ್ಕರು, ಮಕ್ಕಳು ಸೇರಿದಂತೆ 9,55,31,863 ಮಹಿಳಾ ಪ್ರಯಾಣಿಕರು ಇದರ ಲಾಭ ಪಡೆದಿದ್ದು, ಇದರ ವೆಚ್ಚ ₹2,77,21,78,538 ಕೋಟಿ ಮೊತ್ತವಾಗಿದೆ ಎಂದರು.ಕೆಎಸ್ಸಾರ್ಟಿಸಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಬ್ಬೀರ್, ಇಂದಿರಾ, ಲಕ್ಷ್ಮೀಬಾಯಿ, ಮುನೀರ್ ಅವರನ್ನು ಸನ್ಮಾನಿಸಲಾಯಿತು. ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಮೇಯರ್ ಕೆ.ಚಮನ್ ಸಾಬ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಕುಕ್ಕವಾಡ, ಎಸ್.ಎಸ್. ಗಿರೀಶ, ವಕೀಲ ಅನೀಸ್ ಪಾಷಾ, ಕೆ.ಜಿ.ಶಿವಕುಮಾರ, ಬಾಬುರಾವ್, ಶಶಿಕಲಾ ಮೂರ್ತಿ, ದಾಕ್ಷಾಯಣಮ್ಮ , ಕೆಎಸ್ಸಾರ್ಟಿಸಿ ಅಧಿಕಾರಿ, ಸಿಬ್ಬಂದಿ ಇದ್ದರು.
- - --14ಕೆಡಿವಿಜಿ10, 11.ಜೆಪಿಜಿ:
ಸಂಭ್ರಮಾಚರಣೆಯಲ್ಲಿ ಬಸ್ ಚಾಲಕರು, ನಿರ್ವಾಹಕರಿಗೆ ಗೌರವಿಸಲಾಯಿತು.