ಕನ್ನಡಪ್ರಭ ವಾರ್ತೆ ಕೋಲಾರ
ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆಯಿಲ್ಲ. ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೊಮ್ಮನಹಳ್ಳಿ ಆನಂದ್ ಒತ್ತಾಯಿಸಿದರು.ತಾಲೂಕಿನ ಕೆಂದಟ್ಟಿಯಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಾಲೂಕು ಕಾರ್ಯಕಾರಣಿ ಸಭೆಯಲ್ಲಿ ಗೋಪೂಜೆ ಸಲ್ಲಿಸಿ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ, ಆದರೂ ಸಿದ್ದರಾಮಯ್ಯರಿಗೆ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಕಾಂಗ್ರೆಸ್ ಶಾಸಕರು ಅವರ ಬೆಂಬಲಿಗರು ಸ್ವಯಂ ಸರ್ಟಿಫಿಕೇಟ್ ಕೊಡಲು ಹೊರಟಿದ್ದಾರೆ. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಬಳಿಕವೂ ಅಧಿಕಾರದಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿರುವುದು ಸರಿಯಲ್ಲ, ಪ್ರಕರಣಗಳ ಆರೋಪವಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಯತ್ನಿಸುವುದು ಸಂವಿಧಾನಕ್ಕೆ ಮಾಡುವ ಅಗೌರವವಾಗಿದೆ, ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಅನುಕೂಲವಾಗುವಂತೆ ರೈತ ಬಜೆಟ್ ಮಂಡಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರವು ರೈತರ ಬಗ್ಗೆ ಗಮನಹರಿಸುತ್ತಿಲ್ಲ, ರಾಜ್ಯದಲ್ಲಿ ಖಜಾನೆ ಸಂಪೂರ್ಣವಾಗಿ ಖಾಲಿ ಮಾಡಿ ದಿವಾಳಿ ಮಾಡಿದ್ದಾರೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ರಾಜ್ಯಪಾಲರನ್ನು ಬಾಂಗ್ಲಾ ದೇಶದ ಮಾದರಿಯಲ್ಲಿ ರಾಜ್ಯದಿಂದ ಓಡಿಸುತ್ತೇವೆ ಎಂಬ ಹೇಳಿಕೆ ನೀಡಿರುವ ಎಂಎಲ್ಸಿ ಐವನ್ ಡಿಸೋಜ ವಿರುದ್ಧ ಪ್ರಕರಣ ದಾಖಲಿಸಬೇಕು, ಕೆಲವು ಕಡೆ ಕಾಂಗ್ರೆಸ್ ನಾಯಕರು ನಾಲಿಗೆಯ ಮೇಲೆ ಹಿಡಿತ ಇಲ್ಲದೇ ಮಾತನಾಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳ ಆಯ್ಕೆ:ಅಧ್ಯಕ್ಷರಾಗಿ ಕೆ.ಚಂದ್ರಶೇಖರಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್, ಮಂಜುನಾಥ್, ಉಪಾಧ್ಯಕ್ಷರಾಗಿ ಮುರಳಿ, ಶ್ರೀಧರ್ ಬಾಬು,ವೆಂಕಟೇಶ್, ಶ್ರೀನಿವಾಸಾಚಾರಿ, ಗೋಪಾಲಪ್ಪ ಕಾರ್ಯದರ್ಶಿಗಳಾಗಿ ಜಗದೀಶ್, ಶಶಿಕುಮಾರ್, ಶ್ರೀನಾಥ್, ಬೈರೇಗೌಡ ಮಂಜುನಾಥ್ ಬೈರೇಷ್ ಸೇರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಲಕ್ಷ್ಮಣಗೌಡ, ನಾರಾಯಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿಜೆಪಿ ಶಿವಣ್ಣ, ಹುಣಸೀಕೋಟೆ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಡಾ.ಆರ್ ನಾರಾಯಣಸ್ವಾಮಿ, ಸತೀಶ್ ಗೌಡ, ಗೋಪಸಂದ್ರ ನಾರಾಯಣಸ್ವಾಮಿ, ಜಿಲ್ಲಾ ಖಜಾಂಚಿ ವೆಂಕಟೇಶ್, ಮುಖಂಡರಾದ ಓಹಿಲೇಶ್, ಮುನಿಸ್ವಾಮಿ ಇದ್ದರು.