ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಲು ರಾಜ್ಯದಲ್ಲಿರುವುದು ನನ್ನ ಸರ್ಕಾರ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಈಗಿನ ರಾಜ್ಯ ಸರ್ಕಾರದ ಬಗ್ಗೆ ಅವರಿಗೇ ಅಪನಂಬಿಕೆ ಮತ್ತು ಅಸಹ್ಯ ಬಂದಂತಿದೆ. ಕಾಂಗ್ರೆಸ್ನಲ್ಲಿ ಎರಡಲ್ಲ, ಹಲವು ಒಡಕುಗಳಿದ್ದು, ಯಾವಾಗ ಸ್ಫೋಟವಾಗುತ್ತದೆ ಎಂದು ಕಾದು ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿ: ಆಶಾ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಲು ರಾಜ್ಯದಲ್ಲಿರುವುದು ನನ್ನ ಸರ್ಕಾರ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಈಗಿನ ರಾಜ್ಯ ಸರ್ಕಾರದ ಬಗ್ಗೆ ಅವರಿಗೇ ಅಪನಂಬಿಕೆ ಮತ್ತು ಅಸಹ್ಯ ಬಂದಂತಿದೆ. ಕಾಂಗ್ರೆಸ್ನಲ್ಲಿ ಎರಡಲ್ಲ, ಹಲವು ಒಡಕುಗಳಿದ್ದು, ಯಾವಾಗ ಸ್ಫೋಟವಾಗುತ್ತದೆ ಎಂದು ಕಾದು ನೋಡೋಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಅವರು ಭಾನುವಾರ ಉಡುಪಿ ಸೋದೆ ಮಠದಲ್ಲಿ ಬಾಳೆ ಮುಹೂರ್ತದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ 15 ಸಾವಿರ ರು. ಗೌರವಧನ ನೀಡಿ ಎಂದು ಆಶಾ ಕಾರ್ಯಕರ್ತರು ಫ್ರೀಡಂ ಪಾರ್ಕ್ನಲ್ಲಿ 15 ದಿನಗಳಿಂದ ನಡೆಸಿದ ಧರಣಿಯನ್ನು ಮುಖ್ಯಮಂತ್ರಿ ಬ್ಲ್ಯಾಕ್ಮೇಲ್ ಎಂದಿದ್ದಾರೆ. ಭಾರತ್ ಜೋಡೋಗೆ 1,000 ಕೋಟಿ ರು.ಗಳನ್ನು ಸ್ವೇಚ್ಛಾಚಾರವಾಗಿ ಹಂಚುವ ಸರ್ಕಾರಕ್ಕೆ, ಆಶಾ ಕಾರ್ಯಕರ್ತರಿಗೆ ಕೇವಲ 350 ಕೋಟಿ ರು. ನೀಡಲಾಗುವುದಿಲ್ಲವೇ ? ರಾಜ್ಯದ 4.75 ಲಕ್ಷ ಕೋಟಿ ರು. ಬಜೆಟ್ನಲ್ಲಿ ಈ ಮೊತ್ತ ಹೊರೆಯಾಗುತ್ತದೆಯೇ ? ಎಂದು ಅವರು ಪ್ರಶ್ನಿಸಿದರು.ಕ್ಷೇತ್ರ ಪುನರ್ವಿಂಗಡಣೆಗೆ ಕಾಂಗ್ರೆಸ್ ವಿರೋಧಕ್ಕೆ ಅರ್ಥವೇ ಇಲ್ಲ. ಚಂದ್ರಬಾಬು ನಾಯ್ಡು ಇದನ್ನು ಐತಿಹಾಸಿಕ ತೀರ್ಮಾನ ಎಂದಿದ್ದಾರೆ, ಸ್ಟಾಲಿನ್ ಈಗಾಗಲೇ ಕಾಂಗ್ರೆಸ್ನಿಂದ ದೂರ ಸರಿದಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶೇ. 50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸಿದರೇ ಸಂಸದರಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ. ದಕ್ಷಿಣ ರಾಜ್ಯಗಳ ಸಂಸದರ ಸಂಖ್ಯೆ ಹೆಚ್ಚಿ ಕೇಂದ್ರದೊಂದಿಗೆ ಆರ್ಥಿಕ ಹಂಚಿಕೆ ಕುರಿತು ಚರ್ಚಿಸಲು ಬಲ ಸಿಗುತ್ತದೆ. ಇದರಲ್ಲಿ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿರುವ ಹುನ್ನಾರವಿದೆ ಎಂಬುದು ಆಧಾರರಹಿತ ಎಂದರು.ಹಸು ಯೋಜನೆ ಸರಿ ಇದೆ: ಮಹಿಳೆಯರಿಗೆ 2,000 ರು. ಹಾಗೂ ಫ್ರೀ ಬಸ್ನಂತಹ ಯೋಜನೆಗಳಿಂದ ಕೇವಲ ಬೊಕ್ಕಸ ಖಾಲಿ ಆಗುತ್ತವೆ. ಅದರ ಬದಲು ಮಹಿಳೆಯರಿಗೆ ದಿನಕ್ಕೆ 20 ಲೀಟರ್ ಹಾಲು ಕೊಡುವ ಹಸು ನೀಡಿದರೆ ತಿಂಗಳಿಗೆ 30 ಸಾವಿರ ರು. ಉಳಿತಾಯವಾಗಿ, ಬಡ ಕುಟುಂಬಗಳು ಸ್ವಾಭಿಮಾನದಿಂದ ಬದುಕುವುದಕ್ಕೆ ಅನುಕೂಲವಾಗುತ್ತದೆ ಎಂದು ತಮ್ಮ ಹಸು ನೀಡುವ ಯೋಜನೆಯನ್ನು ಸಮರ್ಥಿಸಿಕೊಂಡರು.15-20 ವರ್ಷಗಳ ದೂರದೃಷ್ಟಿಯ ಯೋಜನೆ: ರಾಜ್ಯದ ಮುಂದಿನ 15-20 ವರ್ಷಗಳ ದೂರದೃಷ್ಟಿಯ ಯೋಜನೆಯನ್ನು ಸದ್ಯದಲ್ಲೇ ಘೋಷಿಸಲಾಗುವುದು. ನಾನು ಸುಮ್ಮನೆ ಆಶ್ವಾಸನೆ ನೀಡುವುದಿಲ್ಲ, ಹಿಂದೆ ಕಾಂಗ್ರೆಸ್ ವಿರೋಧದ ನಡುವೆಯೂ 14 ತಿಂಗಳ ಅವಧಿಯಲ್ಲಿ 25 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಿ ತೋರಿಸಿದ್ದೇನೆ. ಸರ್ಕಾರದ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದರೆ ಹಣದ ಕೊರತೆ ಇರುವುದಿಲ್ಲ ಎಂದು ಹೇಳಿದರು.ಕೆಐಎಡಿಬಿ ಹೆಸರಿನಲ್ಲಿ ಕೃಷಿಕರನ್ನು ಒಕ್ಕಲೆಬ್ಬಿಸುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ, ಕರ್ನಾಟಕವನ್ನು ಜಪಾನ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಹೇಳುವ ಸಿಎಂ ಅವಧಿಯಲ್ಲಿ, ಹಿಂದೆ ದೇವೇಗೌಡರು ಬಿಡದಿಗೆ ತಂದಿದ್ದ ಜಪಾನ್ ಮೂಲದ ಟೊಯೋಟಾ ಕಂಪನಿ ಸರ್ಕಾರದ ನೀತಿಯಿಂದ ಇಲ್ಲಿ ಹೂಡಿಕೆ ಮಾಡಲಾಗದೆ ಮಹಾರಾಷ್ಟ್ರದಲ್ಲಿ 25 ಸಾವಿರ ಕೋಟಿ ರು. ಹೂಡಿಕೆ ಮಾಡುತ್ತಿದೆ ಎಂದು ಸಚಿವರು ಟೀಕಿಸಿದರು.
1.32 ಲಕ್ಷ ಕೋಟಿ ರು. ಸಾಲ: ಐದು ಗ್ಯಾರಂಟಿಗಳಿಂದ ಜನರ ಮೇಲೆ ತೆರಿಗೆ ಹೊರಿಸಿರುವ ಸರ್ಕಾರ, ಈಗ 1.32 ಲಕ್ಷ ಕೋಟಿ ರು. ಸಾಲ ಮಾಡಲು ಹೊರಟಿದೆ. 2,500 ರು. ಬರ ಪರಿಹಾರ ಘೋಷಿಸಿ ಕೇವಲ 500 - 1,000 ರು. ನೀಡಿದ್ದಾರೆ. ಹಳೆಯ ಗುತ್ತಿಗೆದಾರರ ಬಿಲ್ ಪಾವತಿಸಲಾಗದ ಇವರು, ಹಳ್ಳಿ ರಸ್ತೆಗಳಿಗೆ 16 ಸಾವಿರ ಕೋಟಿ ರು. ಘೋಷಿಸಿದ್ದಾರೆ. ಎಲ್ಲಿದೆ ನಿಮ್ಮತ್ರ ದುಡ್ಡು ? ಎಂದು ಪ್ರಶ್ನಿಸಿದರು. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವ ಚಾಳಿ ಬೆಳೆಸಿಕೊಂಡಿರುವ ಕಾಂಗ್ರೆಸ್ ನಾಯಕರಿಗೆ ದೆಹಲಿಗೆ ಹೋಗಿ ಕೆಲಸ ಮಾಡಿಸಿಕೊಳ್ಳುವ ತಿಳುವಳಿಕೆ ಇಲ್ಲ. ನಾನು ಎರಡು ಬಾರಿ ಸಿಎಂ ಆಗಿದ್ದಾಗ ಎಂದೂ ಕೇಂದ್ರ ದುಡ್ಡು ಕೊಟ್ಟಿಲ್ಲ ಎಂದು ಹೇಳಿರಲಿಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಕೂತು ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕಿಡಿಕಾರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.