ಸವಣೂರು: ಸ್ಪಷ್ಟ ಹಾಗೂ ಜನಪರ ಆಡಳಿತವನ್ನು ರಾಜ್ಯದಲ್ಲಿ ಆಳ್ವಿಕೆ ಮಾಡಿದ ಧೀಮಂತ ನಾಯಕ, ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.ತಾಲೂಕಿನ ಮಂತ್ರವಾಡಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಬಾರದಲ್ಲಿ ಅಭ್ಯರ್ಥಿ ಯಾಸೀರಖಾನ ಪಠಾಣ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಡವರು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಭಿಕ್ಷೆ ಬೇಡಿ ತಿನ್ನುವುದನ್ನು ಅರಿತುಕೊಂಡು ಇನ್ನೂ ಮುಂದೆ ಯಾರು ಹಸಿವಿನಿಂದ ಬಳಲಬಾರದು ಎಂದು ಸುಮಾರು ೧೦ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ರಾಜ್ಯದಲ್ಲಿಯೆ ಮಾದರಿಯಾಗಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಇಂತಹ ಸರಳ ದಿಟ್ಟ ನಾಯಕನಿಗೆ ಮುಡಾ ಹಗರಣ ಎಂಬ ಹಣೆಪಟ್ಟ ಕಟ್ಟಲು ಬಿಜೆಪಿದವರು ಹೊರಟಿದ್ದಾರೆ. ಆದರೆ ಇದು ಯಾವುದೂ ರಾಜ್ಯದಲ್ಲಿ ನಡೆಯಲ್ಲ. ಸುಮಾರು ೪೦ ವರ್ಷದ ರಾಜಕೀಯ ಅನುಭವದಲ್ಲಿ ಎಲ್ಲಿಯೂ ಒಂದು ಕಪ್ಪುಚುಕ್ಕಿ ಇಲ್ಲದೇ ರಾಜಕೀಯ ಮಾಡಿದ್ದಾರೆ. ಇನ್ನೂ ಮೂರು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಹಾಗೂ ಈ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.