ಸಿದ್ದರಾಮಯ್ಯ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ: ಸಚಿವ ಡಾ.ಎಚ್.ಸಿ. ಮಹದೇವಪ್ಪ

KannadaprabhaNewsNetwork |  
Published : Oct 01, 2024, 01:16 AM IST

ಸಾರಾಂಶ

ಉತ್ತರ ಪ್ರದೇಶ, ಬಿಹಾರ, ಗುಜರಾತ್‌ ಸೇರಿದಂತೆ 250ಕ್ಕೂ ಹೆಚ್ಚು ಮಂತ್ರಿಗಳು, ಶಾಸಕರು, ಸಂಸದರ ಮೇಲೆ ಎಫ್‌ಐಆರ್‌ ದಾಖಲಾಗಿವೆ. ಕಾನೂನು ಪ್ರಕಾರ ಏನಾಗಬೇಕೋ ಅದು ಆಗುತ್ತದೆ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಮಾತ್ರ ಬಿಜೆಪಿಯವರು ಟಾರ್ಗೆಟ್‌ ಮಾಡಿ, ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ .

ಕನ್ನಡಪ್ರಭ ವಾರ್ತೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಆದರೆ ಪ್ರಜಾಪ್ರಭುತ್ವ ಸಾಗುತ್ತಿರುವ ದಿಕ್ಕಿನ ಬಗ್ಗೆ ನೋವುಪಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಜೀವನದಲ್ಲಿ ನಾನು ತಪ್ಪು ಮಾಡಿಲ್ಲ. ಆದರೂ ಈ ರೀತಿಯಾಗುತ್ತಿರುವ ನೋವು ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ ಎಂದರು.

ಉತ್ತರ ಪ್ರದೇಶ, ಬಿಹಾರ, ಗುಜರಾತ್‌ ಸೇರಿದಂತೆ 250ಕ್ಕೂ ಹೆಚ್ಚು ಮಂತ್ರಿಗಳು, ಶಾಸಕರು, ಸಂಸದರ ಮೇಲೆ ಎಫ್‌ಐಆರ್‌ ದಾಖಲಾಗಿವೆ. ಕಾನೂನು ಪ್ರಕಾರ ಏನಾಗಬೇಕೋ ಅದು ಆಗುತ್ತದೆ. ಆದರೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಮಾತ್ರ ಬಿಜೆಪಿಯವರು ಟಾರ್ಗೆಟ್‌ ಮಾಡಿ, ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ ಎಂದರು.

ಚುನಾವಣಾ ಬಾಂಡ್‌ ಪ್ರಕರಣದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಜೆ.ಪಿ. ನಡ್ಡಾ, ಮುಖಂಡರಾದ ನಳಿನ್‌ಕುಮಾರ್‌ ಕಟೀಲ್‌, ಬಿ.ವೈ. ವಿಜಯೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿದೆ. ಅರುಣ್‌ ಜೇಟ್ಲಿ ಅವರಿದ್ದಾಗ ಈ ಬಾಂಡ್‌ ಆರಂಭಿಸಲಾಯಿತು. ಇದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಇ.ಡಿ. ಸಿಬಿಐ ಮತ್ತಿತರ ದಾಳಿಗೊಳಗಾದವರು ದೇಣಿಗೆ ನೀಡಿದ್ದಾರೆ. ಹೀಗಿರುವಾಗ ಬಿಜೆಪಿಯವರು ಎರಡು ನಾಲಿಗೆಯಲ್ಲಿ ಮಾತನಾಡುತ್ತಾರೆ ಎಂದು ಅವರು ವಿಷಾದಿಸಿದರು.

ಪಕ್ಷದ ನಾಯಕರೊಬ್ಬರು ಒಂದು ಸಾವಿರ ಕೋಟಿ ರು. ಇಟ್ಟುಕೊಂಡು ಸಿಎಂ ಆಗಲು ರೆಡಿಯಾಗಿದ್ದಾರೆ ಎಂಬ

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹದೇವಪ್ಪ, ಹಿಂದೆ ಯತ್ನಾಳ್‌ ಸಿಎಂ ಕುರ್ಚಿಗೆ ಎರಡು ಸಾವಿರ ಕೋಟಿ ರು. ನೀಡಬೇಕು ಎಂದು ಹೇಳಿದ್ದರು. ಬಿಜೆಪಿಯ ಮನೆಯೇ ನೆಟ್ಟಗಿಲ್ಲ. ಆದರೂ ದೆಹಲಿ, ರಾಜಭವನ ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೇರಳ, ತಮಿಳುನಾಡು, ದಿಲ್ಲಿಯಲ್ಲಿ ರಾಜ್ಯಪಾಲರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಗೊತ್ತಿದೆ. ಇ.ಡಿ ಯನ್ನು ಮುಚ್ಚಿಬಿಡಿ ಎಂದು ನ್ಯಾಯಾಲಯವೊಂದು ಹೇಳಿದೆ. ಹೀಗಿರುವಾಗ ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡಿಸಿದರೆ ತಾವು ಬಂದು ಕೂರಬಹುದು ಎಂದು ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಇರಲಿ, ಬಿಡಲಿ ಕಾಂಗ್ರೆಸ್‌ ಸರ್ಕಾರ ಇರುತ್ತದೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನನಗೂ ಶುಭ ದಿನ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಆದರೆ ಕಾಂಗ್ರೆಸ್‌ ಒಗ್ಗಟ್ಟಾಗಿದೆ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದಲ್ಲಿ ಬಹುಮತದ ಆಧಾರದ ಮೇಲೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಬದಲಾಗುವುದಿಲ್ಲ. ಆದರೆ ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ