ಲಕ್ಷ್ಮೇಶ್ವರ: 12 ಶತಮಾನದಲ್ಲಿ ಬಾಳಿದ ಶಿವಶರಣ ಸಿದ್ದರಾಮೇಶ್ವರರು ಅನೇಕ ವಚನ ರಚಿಸಿ ಕಾಯಕ ತತ್ವ ಸಾರಿದ ಮಹಾನ್ ಶರಣಾಗಿದ್ದಾರೆ. ಅವರ ಆದರ್ಶ ನಾವು ಅಳವಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭೋವಿ ಸಮಾಜವು ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶ್ರಮ ಪಡುವ ಮೂಲಕ ತಮ್ಮ ದಿನನಿತ್ಯದ ಬದುಕು ಸಾಗಿಸುತ್ತಾರೆ. ಶಿವಶರಣ ಸಿದ್ದರಾಮೇಶ್ವರರು ಕಾಯಕ ತತ್ವದ ಮೇಲೆ ಅಪಾರ ನಂಬಿಕೆ ಇಟ್ಟು ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದರು. ಸಿದ್ದರಾಮೇಶ್ವರರು ಅನೇಕ ವಚನ ರಚಿಸಿ ಕಾಯಕದ ಮಹತ್ವ ಸಾರಿದ್ದಾರೆ. ಅನುಭವ ಮಂಟಪದಲ್ಲಿ ಶಿವಶರಣ ಸಿದ್ದರಾಮೇಶ್ವರರು ಅತ್ಯಂತ ಶ್ರೇಷ್ಠ ಶರಣಾಗಿದ್ದರು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಭೋವಿ ಸಮಾಜವನ್ನು ಎಸ್ಸಿ ಮೀಸಲಾತಿ ಪಡೆಯುವದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕಲ್ಲು ಒಡೆದು ಜೀವನ ಸಾಗಿಸುವ ಬಡ ಭೋವಿ ಸಮಾಜದ ಜನತೆ ನಿಜವಾಗಿಯೂ ಹಿಂದುಳಿದವರಾಗಿದ್ದಾರೆ. ಭೋವಿ ಸಮಾಜದ ಪೀಠಾಧಿಪತಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಅತ್ಯಂತ ಪ್ರಭಾವಶಾಲಿಗಳಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜ ಇನ್ನೂ ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹೇಳಿದರು.
ಈ ವೇಳೆ ಭೋವಿ ವಡ್ಡರ ಸಮಾಜದ ಪೀಠಾಧಿಪತಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ, ಭೋವಿ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಕಲ್ಲು ಒಡೆದು ಮನೆ ಮಂದಿರ ಕಟ್ಟಿ ಜೀವನ ಸಾಗಿಸುವ ಸಮಾಜ ನಮ್ಮದಾಗಿದೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಎತ್ತರಿಸುವ ಕಾರ್ಯ ನಾವೆಲ್ಲ ಮಾಡಬೇಕಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯ, ಸಂಸ್ಕೃತಿ ಹಾಗೂ ಸಂಪ್ರದಾಯ ತಿಳಿಸಿಕೊಡುವ ಕಾರ್ಯ ಮಾಡಬೇಕು ಎಂದು ಹೇಳಿದರು.ಸಮಾರಂಭದಲ್ಲಿ ರವಿ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್.ಎಸ್. ಕರಿದುರಗಣ್ಣವರ ಸಿದ್ದರಾಮೇಶ್ವರ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯರು ಇದ್ದರು.