ಸಿದ್ದರಾಮಯ್ಯ ಖುರ್ಚಿ ಅಲ್ಲಾಡುತ್ತಿದೆ: ಬೊಮ್ಮಾಯಿ

KannadaprabhaNewsNetwork |  
Published : Sep 04, 2024, 01:50 AM IST
ಸಸಸ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಏನೂ ಕೆಲಸ ಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ

ಗದಗ: ಸಿಎಂ ಸಿದ್ದರಾಮಯ್ಯ ಕುಳಿತಿರುವ ಖುರ್ಚಿ ಅಲ್ಲಾಡುತ್ತಿದೆ ಎನ್ನುವ ಭಾವ ಸೃಷ್ಟಿಯಾಗಿದೆ. ಸಿಎಂ ಖುರ್ಚಿ ಮೇಲೆ ನಾನು ಕೂರಬೇಕೆಂಬ ಅದಮಿಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕರ ಆಸೆ ಈಗ ಹೊರಹೊಮ್ಮುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸರಿ ಇದೆ ಅಂತಾ ಹೇಳುತ್ತಾನೇ, ಒಳಗಡೆಯಿಂದ ದೋಣಿಗೆ ತೂತು ಕೊರೆಯುವುದು ರಾಜಕಾರಣ. ಇದು ಈಗ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ. ವಿರೇಂದ್ರ ಪಾಟೀಲರು ಅತ್ಯಂತ ಬಲಿಷ್ಠ ಮುಖ್ಯಮಂತ್ರಿಗಳಾಗಿದ್ದರು ರಾತ್ರೋರಾತ್ರಿ ಎಲ್ಲ ಶಾಸಕರು ಬದಲಾದರು. ದೇವರಾಜ್ ಅರಸು, ಎರಡನೇ ಬಾರಿ ಸ್ವಂತ ಶಕ್ತಿಯಲ್ಲಿ‌ ಆರಿಸಿ ಸಿಎಂ ಆಗಿದ್ದರು. ರಾತ್ರೋರಾತ್ರಿ ಬದಲಾವಣೆ ಮಾಡಿ ಗುಂಡೂರಾವ್ ಮುಖ್ಯಮಂತ್ರಿಗಳಾದರು. ಬಂಗಾರಪ್ಪ ಅವರಿಗೆ 183 ಶಾಸಕರ ಬಲವಿತ್ತು. ಆಗಲೂ ಸಿಎಂ ಬದಲಾದರು. ಕಾಂಗ್ರೆಸ್ ನಲ್ಲಿ ಈ ರಾಜಕಾರಣ ನಡೀತಾನೇ ಇದೆ. ಆದರೆ ಅನಗತ್ಯವಾಗಿ ವಿರೋಧ ಪಕ್ಷಗಳ ಬಗ್ಗೆ ಟೀಕೆ ಮಾಡುತ್ತಾರೆ ಎಂದರು.

ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಏನೂ ಕೆಲಸ ಮಾಡಿಲ್ಲ ಎನ್ನುವುದು ಗ್ರಾಮೀಣ ಪ್ರದೇಶಗಳನ್ನೊಮ್ಮೆ ಸುತ್ತಿ ಬಂದರೆ ಗೊತ್ತಾಗುತ್ತದೆ. ಇದರಿಂದ ಜನರು ಭ್ರಮನಿರಸನರಾಗಿದ್ದಾರೆ. ಕೇವಲ ಜನರು ಮಾತ್ರವಲ್ಲ ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರದ ಕಾರ್ಯ ವೈಖರಿಯಿಂದ ಭ್ರಮನಿಸರನರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಯಾಗಿದೆ ಎಂದರು.

ಆರ್.ವಿ.ದೇಶಪಾಂಡೆ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸಹಜ ಪ್ರಕ್ರಿಯೆ, ದೇಶಪಾಂಡೆ ಅವರ ಬಗ್ಗೆ ವ್ಯಾಖ್ಯಾನ ಮಾಡಲ್ಲ‌, ನಾನು ಸಣ್ಣವನು, ಯಾವ ಕಾರಣಕ್ಕಾಗಿ ದೇಶಪಾಂಡೆ ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಅವರ ಹೇಳಿಕೆ ನಂತರ ಕಾಂಗ್ರೆಸ್ ನಲ್ಲಿ ಹಲವು ರೀತಿಯ ಪ್ರತಿಕ್ರಿಯೆ ಬಂದಿವೆ. ನಾನು ಮತ್ತೊಮ್ಮೆ ಅತ್ಯಂತ ಗಟ್ಟಿಯಾಗಿ ಹೇಳುತ್ತೇನೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದಕ್ಕೆ ಕೈ ನಾಯಕರ ಪ್ರತಿಕ್ರಿಯೆ ಸಾಕ್ಷಿಯಾಗಿದೆ ಎಂದರು.

ಮುಡಾ ಹಗರಣದ ಪ್ರಶ್ನೆಗೆ ಉತ್ತರಿಸಿ ಬೊಮ್ಮಾಯಿ, ಮುಡಾದಲ್ಲಿ ಹಗರಣ ಆಗಿಲ್ಲ ಅಂತಾರೆ, ಈಗ ಆ ಕಾಲದಲ್ಲಿದ್ದ ಕಮಿಷನರ್ ಅವರನ್ನು ಕಾರಣ ಕೊಟ್ಟು ಅಮಾನತ್ತು ಮಾಡಿದ್ದಾರೆ. ತಾಂತ್ರಿಕ‌ ಸಮಿತಿ ರಿಪೋರ್ಟ್ ಆಧಾರದಲ್ಲಿ ಅಮಾನತು ಮಾಡಲಾಗಿದೆ ಎಂದು ಅದಕ್ಕೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಹಾಗಾದರೆ ತಾಂತ್ರಿಕ ಸಮಿತಿ ತಪ್ಪನ್ನು ಕಂಡು ಹಿಡಿದಿದೆ ಎನ್ನುವುದು ಇದರಿಂದಲೇ ಸಾಬೀತಾಯಿಲ್ಲವೇ ಸರ್ಕಾರ ಕಮಿಷನರ್ ಅವರನ್ನು ಸಸ್ಪೆಂಡ್ ಮಾಡಿದನ್ನು ಗಮನಿಸಿದಲ್ಲಿ ಎಲ್ಲವೂ ಕಾನೂನು ಬದ್ಧವಾಗಿ ನಡೆದಿಲ್ಲ ಎನ್ನುವುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ ಎಂದರು.

ಕೋವಿಡ್ ವರದಿ ಕುರಿತು ಮಾತನಾಡಿದ ಅವರು, ಕೋವಿಡ್ ವರದಿ ಹೊರಗಡೆ ಬರಲಿ, ಯಾರೂ ಸಮರ್ಥನೆ ಮಾಡಿಕೊಂಡಿಲ್ಲ, ಈಗ ಮಧ್ಯಂತರ ವರದಿ ಬಂದಿದೆ, ಫೈನಲ್ ವರದಿ ಬರಲಿ. ಆ ಮೇಲೆ ಚರ್ಚೆ ಮಾಡೋಣ, ರಾಜ್ಯ ಸರ್ಕಾರ ಏನೇ ತರಾತುರಿ ಮಾಡಿದರೂ ಸತ್ಯಕ್ಕೆ ಜಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ