ಬೆಳಗಾವಿ : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಸರ್ಕಾರ ಆಗಿದೆ. ಹಿಂದುಗಳಿಗೆ ರಕ್ಷಣೆ ಇಲ್ಲ. ವಕ್ಫ್ ವಿರುದ್ಧ ಹೋರಾಟ ತಾರ್ಕಿಕ ಅಂತ್ಯಕ್ಕೆ ಕೊಂಡಯ್ಯಬೇಕಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ವಕ್ಫ್ ವಿರುದ್ಧದ ಜನಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಖಾನ್ ನಾಲ್ಕೂವರೆ ಅಡಿ ಇದ್ದಾನೆ. ಎಲ್ಲವನ್ನೂ ಅಲ್ಲಾನ ಆಸ್ತಿ ಎನ್ನುತ್ತಾನೆ. ನಿಮ್ಮ ಅಲ್ಲಾಗೂ, ಭಾರತಕ್ಕೂ ಏನೂ ಸಂಬಂಧ? ಇಸ್ಲಾಂ, ಕ್ರೈಸ್ತರು ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಳೆದುಕೊಂಡು ಬಂದಿದ್ದೀರಿ. ನಿಮ್ಮ ಪ್ರವಾದಿಗೂ, ನಮ್ಮ ದೇಶಕ್ಕೂ ಏನೂ ಸಂಬಂಧ ಇಲ್ಲ. ಇಲ್ಲಿರುವುದು ರಾಮನ ಭೂಮಿ, ಕೃಷ್ಣನ ಭೂಮಿ, ಶಿವಾಜಿ ಮಹಾರಾಜ, ಚನ್ನಮ್ಮನ ಭೂಮಿ. ಭಾರತ ಹಿಂದು ಧರ್ಮದ ನೆಲೆಬೀಡು. ಹಿಂದುಗಳು ಸಂಘಟಿತರಾಗಬೇಕಿದೆ ಎಂದು ಹೇಳಿದರು.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ವಕ್ಫ್ ವಿರುದ್ಧದ ಹೋರಾಟದ ಅಂತ್ಯದಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಇದರಲ್ಲಿ 10 ಲಕ್ಷ ಜನರು ಸೇರಲಿದ್ದಾರೆ. ಸಮಾವೇಶಕ್ಕೆ ಎಲ್ಲೆಡೆಯಿಂದ ವಾಹನ ವ್ಯವಸ್ಥೆ ಮಾಡಲಾಗುವುದು. ಬೆಳಗಾವಿಯಿಂದ ಒಂದು ಲಕ್ಷ ಜನರನ್ನು ಕರೆದುಕೊಂಡು ಹೋಗಲಾಗುವುದು. ಬೆಳಗಾವಿಯಿಂದ ₹1 ಕೋಟಿ ಸಂಗ್ರಹಿಸಲಾಗುವುದು. ಸಮಾವೇಶಕ್ಕೆ ಹತ್ತಾರು ಕೋಟಿ ರುಪಾಯಿ ಖರ್ಚಾಗುತ್ತದೆ. ನಾನೊಬ್ಬನೇ ಮಾಡಬಹುದಿತ್ತು. ಯತ್ನಾಳ್ ಒಬ್ಬರೇ ಮಾಡಬಹುದಿತ್ತು. ಆದರೆ ಹಾಗೆ ಮಾಡಿದರೆ ನಾವೂ ಪೂಜ್ಯ ತಂದೆ, ಪೂಜ್ಯ ಮಗ ಆಗುತ್ತೇವೆ. ಹಾಗಾಗಿ ಬಿಜೆಪಿ ಕಾರ್ಯಕರ್ತರಿಂದ ಹಣ ಸಂಗ್ರಹಿಸಿ ಮಾಡುತ್ತೇವೆ ಎಂದು ಹೇಳಿದರು.ನಮ್ಮದು ನಿಶ್ವಾರ್ಥದ ಹೋರಾಟ:
ನಮಗೆ ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶವಿಲ್ಲ. ವಕ್ಫ್ ನಿಂದ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಮರಿಗೂ ಅನ್ಯಾಯವಾಗಿದೆ. ಈ ಹೋರಾಟದಲ್ಲಿ ಸ್ವಾರ್ಥವಿಲ್ಲ. ಇದು ಸ್ವಾರ್ಥದ ವಿರುದ್ಧ ನಿಸ್ವಾರ್ಥರ ಹೋರಾಟ. ನ.2ರಂದು ನಾವೆಲ್ಲರೂ ದೆಹಲಿಗೆ ಹೋಗಿ
ವಕ್ಪ್ ಅನ್ಯಾಯದ ವಿರುದ್ಧ ಸಮಿತಿಗೆ ವರದಿ ನೀಡುತ್ತೇವೆ ಎಂದು ತಿಳಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಸಿ.ಎಂ. ಸಿದ್ದೇಶ, ಬಿ.ಪಿ. ಹರೀಶ್ , ಎನ್.ಆರ್. ಸಂತೋಷ, ಕಿರಣ ಜಾಧವ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ವಕ್ಫ್ ಭೂಕಬಳಿಕೆ ವಿರೋಧಿಸಿ ನಗರದ ವೀರರಾಣಿ ಚನ್ನಮ್ಮ ವೃತ್ತದಿಂದ ಗಾಂಧಿಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.