ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Aug 18, 2024, 01:56 AM ISTUpdated : Aug 18, 2024, 10:41 AM IST
prahlad joshi

ಸಾರಾಂಶ

ಮುಡಾ ಹಗರಣದಲ್ಲಿ ತಮ್ಮ ಪಾತ್ರ ಇಲ್ಲದಿದ್ದರೆ ಮುಖ್ಯಮಂತ್ರಿಗಳು ತನಿಖೆಗೆ ಸಹಕಾರ ನೀಡಬೇಕು. ಕಾನೂನು ತಜ್ಞರ ಸಲಹೆ ಪಡೆದುಕೊಂಡ ನಂತರವೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿ:  ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು, ಕಾನೂನು ತಜ್ಞರ ಸಲಹೆ ಪಡೆದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಈ ಕ್ರಮ ಯಾವುದೇ ವ್ಯಕ್ತಿಯ ಸಾರ್ವಜನಿಕ ಬದುಕಿನಲ್ಲಿ ಶುದ್ಧತೆ ಕಾಪಾಡಲು ಬಹುದೊಡ್ಡ ಹೆಜ್ಜೆ. ಯಾರೇ ಇದ್ದರೂ ಸಹಿತ ಉನ್ನತ ಸ್ಥಾನದಲ್ಲಿದ್ದಾಗ, ಆರೋಪ ಬಂದಾಗ ತನಿಖೆ ಆಗಬೇಕು. ಸಮಗ್ರ ತನಿಖೆಗೆ ಎಲ್ಲ ರೀತಿಯ ಕ್ರಮವಾಗಬೇಕು. ಭ್ರಷ್ಟಾಚಾರ ಮಾಡಬೇಕಾದರೆ ಭಯ ಇರಬೇಕು ಎಂಬ ಹಿನ್ನೆಲೆಯಲ್ಲಿ ಅಳೆದು ತೂಗಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಅನುಮತಿ ಕೊಡುವ ಮುನ್ನ ಕಾನೂನು ತಜ್ಞರ ಸಲಹೆ ಪಡೆದಿರುತ್ತಾರೆ ಎಂದರು.

ಸಿದ್ದರಾಮಯ್ಯ ತನಿಖೆಗೆ ಸಹಕಾರ ಕೊಡುತ್ತಾರೆ ಎಂಬ ಭರವಸೆ ಇದೆ. ಅವರು ತಪ್ಪು ಮಾಡಿಲ್ಲ ಎಂದಾದರೆ ಏನೂ ತೊಂದರೆ ಆಗಲ್ಲ. ಭಯಪಡುವ ಅಗತ್ಯವೇ ಇಲ್ಲ. ಸಿದ್ದರಾಮಯ್ಯ ತನಿಖೆಗೆ ಅಡೆತಡೆ ಮಾಡಬಾರದು. ಅವರು ಕಾನೂನು ಹೋರಾಟ ಮಾಡಲಿ, ಅದಕ್ಕೆ ನಮ್ಮದೇನೂ ತಕರಾರು ಇಲ್ಲ. ಆದರೆ ಕಾನೂನಿನ ನೆಪ ಇಟ್ಟುಕೊಂಡು ತನಿಖೆಗೆ ಅಡ್ಡಿ ಮಾಡಬಾರದು. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಇದೇ ರೀತಿ ಆಗಿತ್ತು. ಆಗ ಹಂಸರಾಜ್‌ ಭಾರದ್ವಾಜ್‌ ರಾಜ್ಯಪಾಲರಾಗಿದ್ದರು. ಅವರನ್ನು ನಾವೇನು ಕಾಂಗ್ರೆಸ್‌ ಏಜೆಂಟ್‌ ಅಂತ ಹೇಳಿರಲಿಲ್ಲ. ಆಗ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು ಎಂದು ನೆನಪಿಸಿದರು.

ಕಾಂಗ್ರೆಸ್‌ ಸರ್ಕಾರವೇ ಐದು ವರ್ಷ ಇರಬೇಕು. ನಾವು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಸಿದ್ದರಾಮಯ್ಯನವರೇ ಐದು ವರ್ಷ ಇದ್ದರೂ ನಮ್ಮ ಅಭ್ಯಂತರ ಇಲ್ಲ. ಆದರೆ ಈಗ ಪ್ರಾಸಿಕ್ಯೂಶನ್ನಿಗೆ ಅನುಮತಿ ಸಿಕ್ಕಿದೆ. ತನಿಖೆ ಎದುರಿಸಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ